ಮಡಿಕೇರಿ ಏ.6 NEWS DESK : ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಡಾ.ಮಮತಾ ಕೇಶವ್ ಅವರು ಬಿಜೆಪಿ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ತಳಮಟ್ಟದಲ್ಲಿ ಪಕ್ಷ ಸಂಘಟನೆಗೊಳಿಸಿ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಮತ್ತು ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುವಂತೆ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ಕುಮಾರ್ ಅಣ್ಣೇಗೇರಿ ತಿಳಿಸಿದ್ದಾರೆ.
ಮಮತಾ ಕೇಶವ್ ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇವರ ಸೇವಾ ಮನೋಭಾವವನ್ನು ಗುರುತಿಸಿ ಹೊಸುರು ಏಷ್ಯಾ ಕಲ್ಚರಲ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಅಲ್ಲದೆ ದೆಹಲಿಯಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ರಾಷ್ಟ್ರೀಯ ಐಕಾನಿಕ್ ಪ್ರಶಸ್ತಿ , ಹೃದಯ ವಾಹಿನಿ ಲಯನ್ಸ್ ಇಂಟರ್ ನ್ಯಾಷನಲ್ ಅವರಿಂದ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗ್ಲೋಬಲ್ ಮೆನ್ ಅವಾರ್ಡ್, ಅಂತರಾಷ್ಟ್ರೀಯ ಸಾಧನೆ ಐಕಾನ್ ಪ್ರಶಸ್ತಿ , ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗಿದೆ.