
ಮಡಿಕೇರಿ ಏ.19 NEWS DESK : ವಾಲ್ನೂರು ಗ್ರಾಮದಲ್ಲಿ ನಡೆದ ಅಪಘಾತ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪಘಾತಗಳು ಆಕಸ್ಮಿಕವಾಗಿ ನಡೆಯುತ್ತದೆ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು ಇದೆ, ಬಂಧನವಾಗಲಿದೆ. ಆದರೆ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದೆ ಎಂದರು.
ಅಪಘಾತ ಆಕಸ್ಮಿಕ ಎನ್ನುವುದು ದೊಡ್ಡ ಹುದ್ದೆಯಲ್ಲಿದ್ದ ಮಾಜಿ ಸ್ಪೀಕರ್, 25 ವರ್ಷಗಳಿಂದ ಶಾಸಕರಾಗಿದ್ದವರಿಗೆ ತಿಳಿದಿಲ್ಲವೇ, ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಬೇಕೆ, ಅಪಘಾತ ನಡೆದರೆ ಕಾಂಗ್ರೆಸ್ ಶಾಸಕರಿಗೆ, ಪಕ್ಷಕ್ಕೆ ದಿಕ್ಕಾರ ಕೂಗುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಜನರ ಹಾದಿ ತಪ್ಪಿಸಬಹುದೆನ್ನುವ ಭ್ರಮೆಯಲ್ಲಿ ಬಿಜೆಪಿ ಮಂದಿ ಇದ್ದಾರೆ, ಆದರೆ ಕೊಡಗಿನ ಜನ ಪ್ರಜ್ಞಾವಂತರಾಗಿದ್ದು, ಬಿಜೆಪಿಯ ಕ್ಷುಲ್ಲಕ ರಾಜಕಾರಣವನ್ನು ಬಲ್ಲವರಾಗಿದ್ದಾರೆ ಎಂದು ಧರ್ಮಜ ಉತ್ತಪ್ಪ ಹೇಳಿದರು.







