
ಮಡಿಕೇರಿ ಏ.20 NEWS DESK : ಭಾರತದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿ, ರಾಜ್ಯಗಳು ಹೊಂದಿರುವ ಅವಕಾಶಗಳನ್ನು ಕಿತ್ತು ಕೊಂಡು, ಅವುಗಳನ್ನು ‘ತಬ್ಬಲಿ’ಯನ್ನಾಗಿಸುವ ಪ್ರಯತ್ನ ಕೇಂದ್ರದ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ರಾಜ್ಯ ಪ್ರಮುಖರಾದ ಇಂದುಧರ್ ಹೊನ್ನಾಪುರ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿಕೊಂಡು ಬಂದ ಕೇಂದ್ರದ ಬಿಜೆಪಿ, ಎಲ್ಲಾ ಪಕ್ಷಗಳಲ್ಲಿದ್ದ ಭ್ರಷ್ಟರನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಮೂಲಕ ಕಡು ಭ್ರಷ್ಟ ಪಕ್ಷವಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಸಮಾಜದಲ್ಲಿ ಜಾತಿ ಧರ್ಮಗಳ ನಡುವೆ ವೈಷಮ್ಯದ ವಿಷ ಬೀಜವನ್ನು ಬಿತ್ತುವ ಮೂಲಕ, ದೇವರು, ಧರ್ಮದ ಹೆಸರಿನಲ್ಲೆ ರಾಜಕೀಯ ಮಾಡುತ್ತಿರುವ ಬಿಜೆಪಿ, ದೇವರು ಮತ್ತು ಧರ್ಮವನ್ನೆ ವಂಚಿಸಿದೆ. ದೇಶದ ಶ್ರೀಮಂತರ ಮೇಲಿನ ತೆರಿಗೆಯನ್ನು ತೆಗೆದು ಹಾಕಿ, ಸಮಾಜದ ರೈತರು, ಬಡವರ್ಗ ಸೇರಿದಂತೆ ಎಲ್ಲಾ ಸ್ತರಗಳ ಜನರ ಮೇಲೆ ತೆರಿಗೆ ಹೇರುವ ಮೂಲಕ ಕೇಂದ್ರ ಸುಲಿಗೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವುದಕ್ಕೆ ಬದಲಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಆರ್‍ಎಸ್‍ಎಸ್ ಕಾರ್ಯಸೂಚಿಯಂತೆ ನಡೆದುಕೊಳ್ಳುತ್ತಿದೆ. ಸಂವಿಧಾನದ ಸರ್ವ ಸಮಾನತೆಯ ಚಿಂತನೆಗಳ ಬದಲಾಗಿ ಚಾತುರ್ವರ್ಣದ ಸಮಾಜವನ್ನು ಸೃಷ್ಟಿಸುವ ಚಿಂತನೆ ಬಿಜೆಪಿಯದ್ದೆಂದು ಟೀಕಿಸಿದರು.
ಸಂಘಟನೆಯ ರಾಜ್ಯ ಸಮಿತಿಯ ಪ್ರಮುಖ, ವಿ.ನಾಗರಾಜ್ ಮಾತನಾಡಿ, ಮೋದಿ ನೇತೃತ್ವದ ಸರ್ಕಾರವನ್ನು ದಿಕ್ಕರಿಸಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸುವುದು ಅಗತ್ಯವೆಂದರು.
ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಕೇಂದ್ರದ ಬಿಜೆಪಿ ನೇತ್ವದ ಸಕಾರ ಸಾಂವಿಧಾನಿಕವಾದ ಸರ್ಕಾರದ ಎಲ್ಲಾ ಸಂಸ್ಥೆಗಳಲ್ಲು ಹಸ್ತಕ್ಷೇಪ ಮಾಡುವ ಮೂಲಕ ಉಸಿರು ಗಟ್ಟಿಸುವ ವಾತಾವರಣವನ್ನು ಸೃಷ್ಟಿಸಿದೆ. ನಿರಂಕುಶ ಪ್ರಭುತ್ವದೆಡೆಗೆ ಹೆಜ್ಜೆ ಹಾಕುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ದೂರವಿಟ್ಟು, ಸಂವಿಧಾನ, ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯನ್ನು ಉಳಿಸುವ ಅಂತಿಮ ಅವಕಾಶ ಈ ಲೋಕಸಭಾ ಚುನಾವಣೆಯಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಜನಾರ್ಧನ, ಮೈಸೂರು ಜಿಲ್ಲಾ ಸಂಚಾಲಕ ಶಿವಕುಮಾರ್ ಆಡುಗೋಡಿ ಹಾಗೂ ಜಿಲ್ಲಾ ಸಂಘಟನೆಯ ಪಾಲಾಕ್ಷ ಉಪಸ್ಥಿತರಿದ್ದರು.








