

ಮಡಿಕೇರಿ ಏ.23 NEWS DESK : ಮಡಿಕೇರಿ ನಗರದ ವಿದ್ಯಾ ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಶಕ್ತಿ ಗಣಪತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಏ.24, 25 ಮತ್ತು 26 ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಎಂ.ಕಿಶೋರ್ ತಿಳಿಸಿದ್ದಾರೆ. ಏ.24 ರಂದು ಸಂಜೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಪೇರಾಜೆ ಅವರ ಆಗಮನ, 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ವಾಚನ ಪ್ರಸಾದ ಸಂಗ್ರಹ ಸ್ಥಳ ಶುದ್ಧಿ ಸುದರ್ಶನ ಹೋಮ, ವಾಸ್ತು ಬಲಿ, ಪ್ರಸಾದ ಬಲಿ, ಪೂಜಾ ಪ್ರಸಾದ ವಿತರಣೆ ನಡೆಯಲಿದೆ.
ಏ.25 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ಅನುಜ್ಞಾ ಕಲಶ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆಯಾಗಲಿದೆ. ಸಂಜೆ ಬಿಂಬಶುದ್ಧಿ, ಕಲಶಪೂಜೆ-ಕಲಶಾಭಿಷೇಕ, ಶಯ್ಯಪೂಜೆ, ಬಿಂಬ ಶಯ್ಯಾಗಮನ ಪೂಜೆ, ಕಳಶ ಮಂಡಲ ರಚನೆ ವಿಧಿ ವಿಧಾನಗಳು ಜರುಗಲಿದೆ. ಏ.26 ರಂದು ಬೆಳಗ್ಗೆ 9.24 ಗಂಟೆಗೆ ನೂತನ ದೇವಾಲಯದಲ್ಲಿ ಶ್ರೀ ಶಕ್ತಿ ಗಣಪತಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಪೇರಾಜೆ ಅವರ ನೇತೃತ್ವದಲ್ಲಿ ಸಂಪನ್ನವಾಗಲಿದೆ. ಅಂದು ಬೆಳಗ್ಗೆ 5ಗಂಟೆಗೆ ಗಣಪತಿ ಹೋಮ, ಬ್ರಹ್ಮ ಕಳಶ ಪೂಜೆ, ಮಿಥುನ ಲಗ್ನದಲ್ಲಿ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆಯಾಗಲಿದೆ ಎಂದು ಸಿ.ಎಂ.ಕಿಶೋರ್ ಮಾಹಿತಿ ನೀಡಿದ್ದಾರೆ. ಪೂಜಾ ವಿಧಿ ವಿಧಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.









