
ಮಡಿಕೇರಿ ಏ.23 NEWS DESK : ಮೊಬೈಲ್ ಬಳಕೆ ಕಡಿಮೆ ಮಾಡಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕತ್ತಲು ಆವರಿಸಿದ ನಂತರ ಗ್ಯಾಜ಼ಟಿಯರ್ ಗಳಿಂದ ದೂರ ಇರಿ. ಸರಿಯಾದ ಆಹಾರ ಕ್ರಮವನ್ನು, ಬದುಕಿನ ನಿರ್ವಹಣೆಯನ್ನು ರೂಪಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಬದುಕಿ ಎಂದು ನೇತ್ರ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪ್ರಶಾಂತ್ ಸಿ.ಆರ್ ಕರೆ ನೀಡಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರೆಡ್ ಕ್ರಾಸ್, ಎನ್ ಸಿಸಿ, ಎನ್ ಎಸ್ ಎಸ್, ಇಸಿ/ಸಿಸಿ, ಐಕ್ಯೂಎಸಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಡೆದ ರಕ್ತದಾನ ಶಿಬಿರ ಹಾಗೂ ಕಣ್ಣಿನ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸೂರ್ಯನಮಸ್ಕಾರ, ಬಸ್ಕಿ ಹೊಡೆಯುವ ಮತ್ತು ಭಾರ ಎತ್ತುವ ಕ್ರಮಗಳಿಂದ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು ಎಂದರು. ಕಣ್ಣು ದೇಹದ ಅತ್ಯಂತ ಅಮೂಲ್ಯ ಅಂಗ. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪ್ರೊಟಿನ್, ವಿಟಮಿನ್ ಯುಕ್ತ ಆಹಾರ ಸೇವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿ, ರೋಗ ಶಾಸ್ತ್ರಜ್ಞರಾದ ಡಾ.ಗಾಯತ್ರಿ ಅವರು ಮಾತನಾಡಿ ರಕ್ತದಾನದ ಮಹತ್ವ ಮತ್ತು ಆರೋಗ್ಯದ ಕುರಿತು ವಿವರಿಸಿದರು. ಆರೋಗ್ಯವಂತರು ಕ್ತದಾನ ಮಾಡಬೇಕು, ನೆಗೆಟಿವ್ ರಕ್ತದ ಗುಂಪುಗಳ ಆಕ್ಷಾಂಕ್ಷಿಗಳು ಹೆಚ್ಚಿದ್ದಾರೆ. ಅಂತಹ ರಕ್ತದ ಗುಂಪಿನವರು ಸ್ವಯಂ ಪ್ರೇರಣೆಯಿಂದ ತಮ್ಮ ಮಾಹಿತಿಗಳನ್ನು ರಕ್ತ ನಿಧಿ ಕೇಂದ್ರಗಳಲ್ಲಿ ದಾಖಲಿಸಿಕೊಳ್ಳಬೇಕು. ಆಗತ್ಯವಿದ್ದಾಗ ಸಂಪರ್ಕಿಸಿ ರಕ್ತ ಪಡೆದುಕೊಳ್ಳಲಾಗುವುದು. ಸ್ವಯಂ ಪ್ರೇರಣೆಯ ರಕ್ತದಾನಕ್ಕೆ ಎಲ್ಲರನ್ನೂ ಪ್ರೇರೆಪಿಸಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ವಿದ್ಯಾರ್ಥಿಗಳು ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡಬೇಕು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ಎಂಬ ಶ್ಲೋಕದ ರೀತಿಯಲ್ಲಿ ಸಮಾಜಕ್ಕೆ ನಾವೇನಾದರೂ ಕೊಡುಗೆಯಾಗಿ ನೀಡಿದರೆ ಸಮಾಜ ನಮಗೆ ಉತ್ತಮ ಪ್ರತಿಫಲ ನೀಡುತ್ತದೆ. ಆದ್ದರಿಂದ ರಕ್ತದಾನ, ನೇತ್ರದಾನದಂತಹ ಶ್ರೇಷ್ಠದಾನಗಳನ್ನು ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು. ರೆಡ್ ಕ್ರಾಸ್ ನ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಗೀತಾಂಜಲಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್ಎಸ್ಎಸ್ ಸಂಯೋಜಕರಾದ ಡಾ. ಮಹದೇವಯ್ಯ ವಂದಿಸಿದರು. ಡಾ. ಸೌಮ್ಯ, ಶ್ರೀ ಅಲೋಕ್, ಡಾ. ನಯನಕಶ್ಯಪ್ ಹಾಗೂ ರೆಡ್ ಕ್ರಾಸ್, ಎನ್ ಎಸ್ ಎಸ್, ಎನ್ ಸಿ ಸಿ ಇಸಿ/ಸಿಸಿ ವಿದ್ಯಾರ್ಥಿ ಕ್ಯಾಡೆಡ್ಸ್ ಗಳು ಉಪಸ್ಥಿತರಿದ್ದರು. ರಕ್ತದಾನದ ಕುರಿತಾದ “ಸ್ಪಂದನ” ವಿಶೇಷ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. 60 ಯುನಿಟ್ ಗಳಷ್ಟು ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.












