
ಸೋಮವಾರಪೇಟೆ ಏ.23 NEWS DESK : ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಅಂಕನಹಳ್ಳಿ ಶ್ರೀ ಮನೆಹಳ್ಳಿ ತಪೋಕ್ಷೇತ್ರದಲ್ಲಿ ತಾ. 24 ಮತ್ತು 25ರಂದು ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಲಿದ್ದು, ಮೂರು ದಿನಗಳ ಕಾಲ ಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 23ರಂದು ಬೆಳಿಗ್ಗೆ 8 ಗಂಟೆಗೆ ಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 6.30ರಿಂದ ಶ್ರೀ ಸ್ವಾಮಿಗೆ ಕಂಕಣ ಧಾರಣೆ, ಮಹಾಮಂಗಳಾರತಿ ನೆರವೇರಲಿದೆ ಎಂದರು.
ತಾ. 24ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಮದನಾಧಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ 6.30ಕ್ಕೆ ಸೂರ್ಯ ಮಂಡಲೋತ್ಸವ, 8.30ಕ್ಕೆ ದಾಸೋಹ ನಡೆಯಲಿದೆ. ತಾ, 25ರಂದು ಬೆಳಿಗ್ಗೆ 5 ಗಂಟೆಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಸೇವೆ ಹಾಗೂ ಅಗ್ನಿಕೊಂಡೋತ್ಸವ ಸೇವೆ ನಡೆಯಲಿದೆ. 7 ಗಂಟೆಗೆ ಸಣ್ಣ ಚಂದ್ರಮಂಡಲೋತ್ಸವ, 9 ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಪೂರ್ವಾಹ್ನ 11 ಗಂಟೆಗೆ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ, 12 ಗಂಟೆಗೆ ದಾಸೋಹ, 1 ಗಂಟೆಗೆ ದೊಡ್ಡ ಚಂದ್ರ ಮಂಡಲೋತ್ಸವ, ಸಂಜೆ 5.30ಕ್ಕೆ ಪ್ರಾಕಾರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ಸ್ವಾಮಿಯವರ ಮಹಾರಥೋತ್ಸವ ನೆರವೇರಲಿದ್ದು, 8 ಗಂಟೆಗೆ ವೃಷಭಲಿಂಗೇಶ್ವರ ಸ್ವಾಮಿಯವರ ಸನ್ನಿಧಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶ್ರೀಮಹಾಂತ ಶಿವಲಿಂಗ ಸ್ವಾಮೀಜಿಗಳು ತಿಳಿಸಿದರು.
ಜನ ಜಾಗೃತಿ-ಸಾಧನೆ-ಸಮ್ಮಾನ: ಜಾತ್ರಾ ಮಹೋತ್ಸವ ಅಂಗವಾಗಿ ತಾ. 25ರಂದು ಮಧ್ಯಾಹ್ನ 1.30ಕ್ಕೆ ಶ್ರೀಮಠದ ಆವರಣದಲ್ಲಿ ಜನ ಜಾಗೃತಿ, ಸಾಧನೆ, ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಕಾರ್ಯಕ್ರಮ ಸಂಯೋಜಕ ಎಸ್.ಮಹೇಶ್ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕೊಡಗು ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಮಧ್ಯಾಹ್ನ 2.30ಕ್ಕೆ ‘ಮಹಿಳಾ ಮಿಲನ’ ಕಾರ್ಯಕ್ರಮ ನಡೆಯಲಿದ್ದು, ‘ಧರ್ಮ, ಸಂಸ್ಕೃತಿ ಮತ್ತು ಮಹಿಳೆ’ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ನ್ಯಾಯಾಧೀಶರಾದ ಬೆಂಗಳೂರಿನ ಜಯಶ್ರೀ ಅವರು ವಹಿಸಲಿದ್ದು, ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜಿಲ್ಲೆಯ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ರಾಷ್ಟ್ರೀಯ ಮಹಿಳಾ ಹಾಕಿ ತರಬೇತುಗಾರ್ತಿ ದೇವರಾಜಮ್ಮ, ಸಾಹಿತಿಗಳಾದ ಫ್ಯಾನ್ಸಿ ಮುತ್ತಣ್ಣ, ಜಲಾ ಕಾಳಪ್ಪ, ಶ.ಗ. ನಯನತಾರಾ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದು, ಇದೇ ಸಂದರ್ಭ ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಎಸ್.ಮಹೇಶ್ ತಿಳಿಸಿದರು.











