
ನಾಪೋಕ್ಲು ಏ.23 NEWS DESK : ಜೀವನದಲ್ಲಿ ನಾವು ಸುಖ, ಶಾಂತಿ, ನೆಮ್ಮದಿಯನ್ನು ಬಯಸುತ್ತೇವೆ. ನಾವು ಬಯಸಿದ ಕ್ಷಣ ಎಲ್ಲವೂ ನಮ್ಮ ಬಳಿಗೆ ಬರುವುದಿಲ್ಲ. ಅವುಗಳನ್ನು ಪಡೆಯಲು ಸತತ ಶ್ರಮಬೇಕು. ಶ್ರಮದ ಜೊತೆಗೆ ದೇವರ ಅನುಗ್ರಹ ಇದ್ದರಷ್ಟೇ ಸುಖ, ಶಾಂತಿ, ನೆಮ್ಮದಿಯನ್ನು ಗಳಿಸಲು ಸಾಧ್ಯ ಎಂದು ಉಡುಪಿ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಬೇಂಗೂರು ಗ್ರಾಮದ ಶ್ರೀ ನಾಡುಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ದೇವರು ಗುಡಿಯಲ್ಲಿ ಮಾತ್ರ ನೆಲೆಸಿರುವುದಲ್ಲ. ಸಮಾಜದ ಎಲ್ಲರ ಹೃದಯದಲ್ಲೂ ನೆಲೆಸಿದ್ದಾರೆ. ಬದುಕಿಗಾಗಿ ನಾವು ಒಂದು ಬುತ್ತಿಯನ್ನು ಆಯ್ದುಕೊಂಡಿರುತ್ತೇವೆ. ಅದು ಬರೀ ಹಣ ಸಂಪಾದನೆಗಾಗಿ ಮಾತ್ರ ಅಲ್ಲ. ಆ ವೃತ್ತಿಯ ಮೂಲಕ ಸಮಾಜದ ಸೇವೆ ಮಾಡುತ್ತಿದ್ದೇವೆ ಎನ್ನುವ ಅರಿವು ನಮ್ಮಲ್ಲಿದ್ದರೆ ವೃತ್ತಿಗೆ ಗೌರವವಿರುತ್ತದೆ. ವೃತ್ತಿಯಲ್ಲಿ ಮೋಸ, ಅವ್ಯವಹಾರಕ್ಕೆ ಎಡೆ ಇರಬಾರದು, ಮೋಸ ಅವ್ಯವಹಾರ ರಹಿತವೃತ್ತಿಯೇ ದೇವರ ಪೂಜೆ. ಭಗವಂತನ ಆರಾಧನೆ ಎಂಬುದು ಒಂದು ಕೆಲಸ ಆಗಬಾರದು. ಅದಕ್ಕೆ ಒಂದು ಸಮಯದ ಮಿತಿ ಹೇರಬಾರದು ಎಂದರು.
ಎಲ್ಲಾ ಕೆಲಸಕ್ಕೂ ಸಮಯವನ್ನು ನಿಗದಿ ಮಾಡುತ್ತೇವೆ. ಉಸಿರಾಟಕ್ಕೆ ಸಮಯ ನಿಗದಿಪಡಿಸಲು ಸಾಧ್ಯವೇ ಅದೇ ರೀತಿ ಭಗವಂತನ ಆರಾಧನೆಗೆ ಸಮಯದ ಮಿತಿ ಇರಬಾರದು ಎಂದರು. ಬಳಿಕ ನೆರೆದ ಭಕ್ತಾದಿಗಳು ಸ್ವಾಮೀಜಿಯವರ ಆಶೀರ್ವಾದ ಪಡೆದು ಫಲವನ್ನು ಸ್ವೀಕರಿಸಿದರು.
ವರದಿ : ದುಗ್ಗಳ ಸದಾನಂದ.







