
ಮಡಿಕೇರಿ ಏ.24 NEWS DESK : ಗ್ಯಾರಂಟಿ ಯೋಜನೆಗಳು ಕೆಲವೇ ತಿಂಗಳಿನಲ್ಲಿ ಸ್ಥಗಿತಗೊಳ್ಳಲಿದ್ದು, ಯಾರು ಕೂಡ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಬೇಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಹೇಳಿದರು.
ಕೊಡಗು ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚದಿಂದ ವಿರಾಜಪೇಟೆ ಕ್ಷೇತ್ರದ ತಿತಿಮತಿ, ಗಂಧದ ಕಾಡು, ಚೆನ್ನಯ್ಯನ ಕೋಟೆ ಪರಿಶಿಷ್ಟ ಜಾತಿಯ ಕಾಲೋನಿಗಳಿಗೆ ಭೇಟಿ ನೀಡಿದ ಶ್ರೀನಿವಾಸ್, ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಭದ್ರತೆಗಾಗಿ ಮತ್ತು ಎಲ್ಲ ವರ್ಗದ ಕಲ್ಯಾಣಕ್ಕಾಗಿ ಮೋದಿ ಸರ್ಕಾರವು ಹಲವಾರು ಶಾಶ್ವತ ಯೋಜನೆಗಳನ್ನು ತಂದಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಪರಿಶಿಷ್ಟ ಜನಾಂಗದ ಏಳಿಗೆಗೆ ಹಲವಾರು ಯೋಜನೆಗಳಿದ್ದು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ತಾವುಗಳು ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ತಿಳಿಸಿದರು.
ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾದ ಅಧ್ಯಕ್ಷ ಪಿ.ಎಂ.ರವಿ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ನಮ್ಮ ಸಮುದಾಯದಲ್ಲಿ ಇತ್ತೀಚಿನ ದಿನದಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದಾರೆ. ನಾವು ದೇಶದ ಸುಭದ್ರತೆಗೆ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ರಾಜಕೀಯದಲ್ಲಿ ನಾವುಗಳು ಬೆಳೆಯಬೇಕೆಂದರೆ ಬಿಜೆಪಿ ಪಕ್ಷವು ಪರಿಶಿಷ್ಟದ ಜಾತಿಯವರಿಗೆ ಅನೇಕ ಸ್ಥಾನಮಾನಗಳು ನೀಡಿದೆ. ಜಿಲ್ಲೆಯಲ್ಲಿ ಪರಿಶುದ್ಧ ಜಾತಿಯವರ ಮತಗಳು ನಿರ್ಣಾಯಕವಾಗಿದ್ದು, ಮೋದಿಯವರು ಮತ್ತೊಮ್ಮೆ ಈ ರಾಷ್ಟ್ರದ ಪ್ರಧಾನ ಮಂತ್ರಿ ಆಗುವುದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ಈ ಸಂದರ್ಭ ವಿರಾಜಪೇಟೆ ಮಂಡಲ ಎಸ್.ಸಿ ಮೋರ್ಚಾದ ಅಧ್ಯಕ್ಷ ಅಭಿಜಿತ್, ಎಸ್ ಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ರವಿ, ಪೊನ್ನಂಪೇಟೆ ಮಂಡಲ ಕಾರ್ಯದರ್ಶಿ ಸುಶೀಲ, ವಿರಾಜಪೇಟೆ ಎಸ್.ಸಿ ಮೋರ್ಚಾದ ಅನೇಕ ಸದಸ್ಯರು, ಗ್ರಾ.ಪಂ ಸದಸ್ಯರುಗಳು, ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.










