
ವಿರಾಜಪೇಟೆ ಏ.26 NEWS DESK : ವಿರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ವಿಶ್ವ ಹಾಕಿ ಕಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಹಾಲಿ ಒಮನ್ ದೇಶದ ಹಾಕಿ ತಂಡದ ಮುಖ್ಯ ತರಬೇತುದಾರರಾಗಿರುವ ಕೂತಂಡ ಕೆ.ಪೂಣಚ್ಚ ಬಿಜೆಪಿಗೆ ಸೇರ್ಪಡೆಯಾದರು.
ವಿರಾಜಪೇಟೆ ನಗರದಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ಚಾಮರಾಜ ಒಡೆಯರ್ ಅವರ ರೋಡ್ ಶೋ ನಡೆದ ಸಂದರ್ಭದಲ್ಲಿ ಪೂಣಚ್ಚ ಅವರು ಬೆಂಬಲಿಗರ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಹಾಗೂ ಪಕ್ಷ ಪ್ರಮುಖರ ಸಮ್ಮುಖದಲ್ಲಿ ಬಿಜೆಪಿ ಗೆ ಸೇರ್ಪಡೆಯಾದರು.
ನಂತರ ಮಾತನಾಡಿದ ಪೂಣಚ್ಚ, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಅಥವಾ ಮೋದಿ ಅವರು ದೇಶವನ್ನು ವಿಶ್ವದ ಭೂಪಟದಲ್ಲಿ ಭಾರತವನ್ನು ವಿಶ್ವ ಗುರು ಮಾಡುವತ್ತಾ ಶ್ರಮವಹಿಸಿದ್ದಾರೆ. ದೇಶದಲ್ಲಿ ನಡೆದಿರುವ ಅಮೂಲಾಗ್ರ ಬದಲಾವಣೆಯು ಹೊಸ ದಿಕ್ಕು ತೋರುವಂತೆ ಮಾಡಿದೆ. ಉತ್ತಮ ಸೇವೆ ನೀಡುವ ದೇಶ ಸೇವಕ ಮೋದಿ ಅವರು ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪಕ್ಷದ ಪ್ರಮುಖರು, ಹಿತೈಷಿಗಳು ಅಪಾರ ಪ್ರಮಾಣದಲ್ಲಿ ಕಾರ್ಯಕರ್ತರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ








