ನಾಪೋಕ್ಲು ಏ.28 NEWS DESK : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಇತಿಹಾಸ ಪ್ರಸಿದ್ಧಿಯಾಗಿರುವ ಕೊಂಡಂಗೇರಿಯಲ್ಲಿ ಉರೂಸ್ ಸಮ್ಮೇಳನ ಶ್ರದ್ಧಾಭಕ್ತಿಯಿಂದ ನಡೆಯಿತು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಸೌಹಾರ್ಧತೆಗೆ ಸಾಕ್ಷಿಯಾದರು. ಕೊಂಡಂಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮೊಹಮ್ಮದ್ ಪೈಗಂಬರ್ ಸ.ಅ ರವರ ಸಂತತಿ ಪುತ್ರರಾದ ಬಹು ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ ಅಲ್ ಹಳ್ರಮಿ (ನ.ಮ) ಹಾಗೂ ಸಮೀಪದ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭದ ಅಂಗವಾಗಿ ಸಾರ್ವಜನಿಕ ಸೌಹಾರ್ಧ ಸಮ್ಮೇಳನ ನಡೆಯಿತು. ಧಾರ್ಮಿಕ ಪಂಡಿತ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ. ಸೇವಾ ಮನೋಭಾವದೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯತೆ ತೋರಬೇಕೆಂದು ಹೇಳಿದ ಅವರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು. ಹೆಸರಾಂತ ಧಾರ್ಮಿಕ ಪ್ರಭಾಷಕ ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ ಮುಖ್ಯ ಭಾಷಣದಲ್ಲಿ ಮಾತನಾಡಿ ಹಚ್ಚ ಹಸಿರಿನೊಂದಿಗೆ ಅಪಾರ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಜಿಲ್ಲೆ ಕೊಡಗು. ಇಲ್ಲಿ ಎಲ್ಲರೂ ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯವೆಂದರು. ಸರ್ವಧರ್ಮದ ಸಮನ್ವಯ ಕೇಂದ್ರಗಳಿಂದ ಶಾಂತಿ ಸಹಬಾಳ್ವೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಸರ್ವಧರ್ಮ ಸಮ್ಮೇಳನಗಳ ಮೂಲಕ ಸಹೋದರತ್ವ ನಿರ್ಮಾಣವಾಗಲು ಸಾಧ್ಯವಾಗಲಿದೆ ಎಂದು ಹೇಳಿದರು. ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಅಸ್ಸಯ್ಯದ್ ಆಟಕೋಯ ಅಸ್ಸಖಾಫ್ ತಂಙಳ್ ಆದೂರು, ಸಯ್ಯದ್ ಎಸ್ ಹಕೀಂ ತಂಙಳ್ ಅಸ್ಪಖಾಫ್ ಆದೂರು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಬ್ದುಲ್ ರೆಹಮಾನ್ ಅಂದಾಯಿ, ಹನೀಫ್, ಅಶ್ರಪ್ ಅಸಹನಿ ಉಸ್ತಾದ್, ಪೇರಂಡ ಎ ಯುಸೂಪ್ ಹಾಜಿ, ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ಹಾಜಿ, ತಕ್ಕ ಮುಖ್ಯಸ್ಥರುಗಳಾದ ಪೇರಿಯಂಡ ಎ ಕುಂಇ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ ಯಹ್ಯಾ ಹಾಜಿ, ಎಂ ಐ ಇಕ್ಬಾಲ್, ಕೊಟ್ಟಿಯಾಟ್ ಎಂ ಶಾದುಲಿ, ಸಮಿತಿಯ ಉಪಾಧ್ಯಕ್ಷ ಪುಡಿಯಂಡ ಈ ಶಾದುಲಿ, ಕಾರ್ಯದರ್ಶಿ ಪೇರಿಯಂಡ ಎಂ.ಹಂಸ ಪ್ರಮುಖರಾದ ಅನೀಪ್ ಸಖಾಫಿ ಸೇರಿದಂತೆ ಜನಪ್ರತಿನಿಧಿಗಳು, ಧಾರ್ಮಿಕ ಪಂಡಿತರು, ಸಮಾಜ ಸೇವಕರು, ಗಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಸ್ಥಳೀಯ ಶಾದಿ ಮಾಲ್ ಆವರಣದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯಅಪಾರ ಸಂಖ್ಯೆಯ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.