ಮಡಿಕೇರಿ ಏ.30 NEWS DESK : ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು.
ಎಮ್ಮೆಮಾಡು ಉರೂಸ್ ಪ್ರಯುಕ್ತ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ತಿಳುವಳಿಕೆಯ ಕೊರತೆಯಿಂದ ಧರ್ಮ- ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು.ಮುಸಲ್ಮಾನರು ಉದಾತ್ತವಾದ, ಆಧ್ಯಾತ್ಮಿಕ ಚಿಂತನೆಯಿಂದ ಬೆಳೆದು ಬಂದಿದ್ದಾರೆ. ಧರ್ಮದ ಬಗ್ಗೆಗಿನ ಅಜ್ಞಾನದಿಂದ ಸಂಘರ್ಷ ಸೃಷ್ಟಿಯಾಗುತ್ತಿದೆ. ಸಮಾಜಕ್ಕೆ ಆತಂಕ ತಂದೊಡ್ಡುವ ಕೆಲಸವನ್ನು ಯಾವ ಯುವಕರು ಮಾಡಬಾರದು ಎಂದರು.
ಇಂದು ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದರಿಂದ ನಾಡಿಗೆ, ರಾಜ್ಯಕ್ಕೆ ತೊಂದರೆಯಾಗಲಿದೆ. ಆದ್ದರಿಂದ ನಿರಂತರ ಜಾಗೃತಿ ಕೆಲಸ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಮನುಷ್ಯತ್ವವನ್ನು ಕಳೆದುಕೊಳ್ಳುವಂತಾಗಬಾರದು. ಪ್ರತಿ ಗ್ರಾಮ, ರಾಜ್ಯವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದರು.
ಸಯ್ಯದ್ ಮುಈನಲಿ ಶಿಹಾಬ್ ತಂಗಳ್ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಮಾಯತ್ ಅಬೂಬಕ್ಕರ್ ಸಕಾಫಿ ಪುದಿಯೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂರ್ಗ್ ಜಮಾಯುತ್ತಲ್ ಉಲಮಾ ಕೋಶಾಧಿಕಾರಿ ಕೆ.ಎಂ.ಹುಸೇನ್ ಸಖಾಫಿ, ತಾಜೂಲ್ ಇಸ್ಲಾಂ ಮುಸ್ಲಿಂ ಜಮಾಯತ್ ಕೋಶಾಧಿಕಾರಿ ಆಲಿ ನೆರೋಟ್, ಎಮ್ಮೆಮಾಡು ಶಹೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಚಕ್ಕೇರ, ಸಿ.ಎಂ.ಮಾಹಿನ್ ಚಂಬಾರಂಡ, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಮೊಹಮ್ಮದ್ ಹಾಜಿ ಕುಂಜಿಲ, ನಾಪೋಕ್ಲು ಜಮಾಯತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಮನ್ಸೂರ್ ಆಲಿ, ಹಂಸ ದೋರೋಟ್, ಕೊಳಕೇರಿ ಜಮಾಯತ್ ಅಧ್ಯಕ್ಷ ಅಬ್ದುಲ್ ನಾಸಿರ್, ಕುಂಜಿಲ ಜಮಾಯತ್ ಅಧ್ಯಕ್ಷ ಶೌಕತ್ತಾಲಿ, ಹಳೆತಾಲೂಕು ಜಮಾಯತ್ ಅಧ್ಯಕ್ಷ ಮುಹಮದ್, ಎಮ್ಮೆಮಾಡು ಜಮಾಯತ್ ಉಪಾಧ್ಯಕ್ಷ ಬಿ.ಯು.ಅಶ್ರಫ್ ಪಾಲ್ಗೊಂಡಿದ್ದರು.
ಪೊಲೀಸ್ ಇಲಾಖೆ ವತಿಯಿಂದ ಎಮ್ಮೆಮಾಡು ಮಖಾಂ ಉರುಸ್ ಪ್ರಯುಕ್ತ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಸಂಚಾರ ದಟ್ಟಣೆ ನಿಯಂತ್ರಿಸಲಾಗಿತ್ತು.
ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಸಾರ್ವಜನಿಕ (ಬಾಣೆ ಚೊರ್) ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.