
ಮಡಿಕೇರಿ ಮೇ 2 NEWS DESK : ಮಕ್ಕಳಿಗೆ ಶಿಕ್ಷಣ ಮುಖ್ಯ, ಓದಿ ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕೆಂದು ಹಾಕಿ ಪಟು, ರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಕರೆ ನೀಡಿದರು.
ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಂದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಾಕಿ ವಿಶ್ವಮಾನ್ಯ ಆಟವಾಗಿದೆ. ಇಂತಹ ಶಿಬಿರದಲ್ಲಿ ಹಾಕಿಯನ್ನು ಕೂಡ ಕಲಿಸಿಕೊಡುತ್ತಿರುವದು ಶ್ಲಾಘನೀಯ. ಯಾವದೇ ಕಾರಣಕ್ಕೂ ಈ ಶಿಬಿರ ನಿಲ್ಲಬಾರದು, ಮುಂದುವರೆಸಿಕೋಡು ಹೋಗಬೇಕೆಂದು ಹೇಳೀದರು. ಶಿಲ್ಪಿ ತನ್ನಲ್ಲಿರುವ ಕಲೆಯನ್ನು ತೋರಿಸಿಕೊಳ್ಳಲ್ಲ, ಅದಾಗಿಯೇ ಹೊರಬರುತ್ತದೆ. ಅದೇ ರೀತಿ ಮಕ್ಕಳ ಪ್ರತಿಭೆ ಬಗ್ಗೆ ಪೋಷಕರಿಗೆ ಗೊತ್ತಿರುತ್ತದೆ. ಅದನ್ನು ಹೊರತರಲು ಪ್ರೋತ್ಸಾಹ ನೀಡಬೇಕು. ಹಿಂದೆ ನಮಗೆಲ್ಲ ಈರೀತಿಯ ಶಿಬಿರ, ಪ್ರೋತ್ಸಾಹ ಇರಲಿಲ್ಲ, ನಾವೇ ಅಭ್ಯಾಸ ಮಾಡಿಕೊಳ್ಳುತ್ತಿದ್ದೆವು. ಆಡುವ ಮೈದಾನಕ್ಕೆ ಮೊದಲು ನಮಿಸಬೇಕು. ಮೈದಾನಕ್ಕೆ ಬರುವವರು ಒಳ್ಳೆಯ ಅಟಗಾರರಾಗುತ್ತಾರೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ದೊಡ್ಡ ಕಾಯಿಲೆಯಾಗಿದ್ದು, ಅಪಾಯಕಾರಿಯಾಗುತ್ತಿದೆ. ಮಕ್ಕಳು ಇದರಿಂದ ದೂರವಿಎಬೇಕು. ವಿದ್ಯಾವಂತರಾಗದಿದ್ದರು ಗುಣವಂತರಾಗಬೇಕು. ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಹಾಕುವಂತಾಗಬಾರದು. ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಇಂತಹ ಶಿಬಿರದಲ್ಲಿ ಯಾವದೇ ಜಾತಿ, ಮತವಿಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಿಂದ ಕಲಿಸುತ್ತಾರೆ. ಮಕ್ಕಳು ಕಲಿಯಬೇಕು. ಅಭ್ಯಸವನ್ನು ನಿಲ್ಲಿಸಬಾರದು, ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಶಾರೀರಿಕ, ಮಾನಸಿಕವಾಗಿ ಸದೃಢರಾಗಬೇಕು ಎಂದರಲ್ಲದೆ, ಕ್ರೀಡಾಕೂಟಗಳು ಆಡಂಬರಕ್ಕೆ ಸೀಮಿತವಾಗಬಾರದು, ದಾಖಲೆ ಮಾಡುವದು ಮುಖ್ಯವಲ್ಲ. ಕ್ರೀಡಾಶಾಲೆ, ಖಾಸಗಿ ಶಾಲೆಗಳ ಮಕ್ಕಳಿಗೆ ಅವಕಾಶ ಹೆಚ್ಚಿಗೆ ಸಿಗುತ್ತದೆ, ಆದರೆ ಸರಕಾರಿ ಶಾಲೆ ಮಕ್ಕಳಿಗೆ ತರಬೇತಿ ನೀಡಿದರೆ ಅವರುಗಳ ಭವಿಷ್ಯಕ್ಕೆ ಒಳಿತಾಗಲಿದೆ. ಅದು ಬಿಟ್ಟು ಮಕ್ಕಳ ಕೈಯಲ್ಲಿ ಮದ್ಯ ಬಾಟಲಿ ಹಿಡಿಸುವದು ಸರಿಯಲ್ಲ, ಈ ಬಗ್ಗೆ ಹೇಳಿದರೆ ಜನಾಂಗ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಮಕ್ಕಳಿಗೆ ನೀತಿ ನಿಯಮ ಕಲಿಸಬೇಕು ಎಂದು ಹೇಳಿದರು.
ವಾಂಡರರ್ಸ್ ಕ್ಲಬ್‌ನ ಕಾರ್ಯದರ್ಶಿ ಪಾರ್ಥ ಚಂಗಪ್ಪ ಮಾತನಾಡಿ, ಶಂಕರ್ ಸ್ವಾಮಿ ಆಲದ ಮರ ಇದ್ದಂತೆ, ಜಾತಿ, ಮತ ಮರೆತು ಎಲ್ಲರನ್ನೂ ಸಮನಾಗಿ ನೋಡಿ ತರಬೇತು ನೀಡಿ ತಯಾರಿರಿ ಮಾಡಿದ್ದಾರೆ. ಈ ಶಿಬಿರದಲ್ಲಿ ಕಲಿತ ಮಕ್ಕಳು ಕೂಡ ಬಾರತ ತಂಡಕ್ಕೆ ಆಡುವಂತಾಗಲಿ, ಮೈದಾನಕ್ಕೆ ಬರುವವರು ಯಾರೂ ಕೂಡ ಹಾಳಾಗುವದಿಲ್ಲ. ಉತ್ತಮರಾಗುತ್ತಾರೆ ಎಂದು ಹೇಳಿದರು.
ವಾಂಡರರ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಕ್ರೀಡಾಪಟು ಜಿ.ಟಿ.ರಾಘವೇಂದ್ರ, ಕೋಟೇರ ನಾಣಯ್ಯ, ತರಬೇತುದಾರ ಗಣೇಶ್, ಶಿಬಿರದ ಸಂಚಾಲಕ ಬಾಬು ಸೋಮಯ್ಯ ಇದ್ದರು. ಇದೇ ಸಂದರ್ಭದಲ್ಲಿ ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ, ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್, ಅವರುಗಳನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಶಿಬಿರಾರ್ಥಿಗಳು ತಾವು ಶಿಬಿರದಲ್ಲಿ ಕಲಿತ ಕಲೆಯನ್ನು ಪ್ರದರ್ಶನ ಮಾಡಿದರು. ವಿದ್ಯಾರ್ಥಿನಿ ದಾರಿಕ, ಸ್ನೇಹ, ಅನಘ ಹಾಗೂ ತಂಡದವರು ಪ್ರಾರ್ಥಿಸಿದರು. ತರಬೇತುದಾರ ವೆಂಕಟೇಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.









