ಮಡಿಕೇರಿ ಮೇ 7 NEWS DESK : ಸಣ್ಣಪುಲಿಕೋಟು ಗ್ರಾಮದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದ ರಸ್ತೆಯನ್ನು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹಲವು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಈಡೇರಿಸಿರುವ ಬಗ್ಗೆ ಭಕ್ತರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ದೇವರ ಉತ್ಸವ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಬಾರಿಯೂ ಮೇ 9 ಮತ್ತು 10 ರಂದು ದೇವಾಲಯದ ಉತ್ಸವ ನಡೆಯಲಿದ್ದು, ಅದಕ್ಕೂ ಮೊದಲೇ ರಸ್ತೆ ಅಭಿವೃದ್ಧಿಯಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ಈ ಹಿಂದೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಭಕ್ತರಿಗೆ ಅನಾನುಕೂಲವಾಗಿತ್ತು. ಇದನ್ನು ಮನಗಂಡ ಕುಯ್ಯಮುಡಿ ಹಾಗೂ ಕಡೋಡಿ ಕುಟುಂಬಸ್ಥರು, ಪ್ರಮುಖರಾದ ಹಾರಿಸ್ ಚೆಟ್ಟಿಮಾನಿ, ವಿಶು ಪ್ರವೀಣ್ ಕುಮಾರ್, ಲವ ಕುಯ್ಯಮುಡಿ, ಎಂ.ಬಿ.ಪ್ರೇಮ್‌ಕುಮಾರ್, ಮಂಗೇರಿರ ಜಗದೀಶ್, ಕೊಟ್ಟುಕಂಡ ದೀಪಕ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಇಸ್ಮಾಯಿಲ್ ಅವರುಗಳು ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನ ಸೆಳೆದು ರಸ್ತೆ ಅಭಿವೃದ್ಧಿಗಾಗಿ ಮನವಿ ಮಾಡಿಕೊಂಡಿದ್ದರು.
ಇದೀಗ ದೇವಾಲಯದ ಮುಂಭಾಗ, ಭಾಗಮಂಡಲ ಮುಖ್ಯ ರಸ್ತೆಯಿಂದ ಕಡೋಡಿ ದೇವಾಲಯಕ್ಕಾಗಿ ಅಯ್ಯಂಗೇರಿಗೆ ತೆರಳುವ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಶಾಸಕರ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣಾ ಸಂದರ್ಭ ಎ.ಎಸ್.ಪೊನ್ನಣ್ಣ ಅವರ ಗೆಲುವಿಗಾಗಿ ಸಹೋದರ ನರೇಶ್ ಕಾರ್ಯಪ್ಪ ಹಾಗೂ ಚೆಟ್ಟಿಮಾನಿ, ಭಾಗಮಂಡಲದ ಕಾಂಗ್ರೆಸ್ ಮುಖಂಡರುಗಳು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ, ಹರಕೆ ಹೇಳಿಕೊಂಡಿದ್ದರು. ಈ ಬಾರಿ ಸ್ವತಃ ಶಾಸಕ ಪೊನ್ನಣ್ಣ ಅವರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಅವರ ಸಮ್ಮುಖದಲ್ಲಿ ಹರಕೆ ತೀರಿಸಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗುತ್ತಿಗೆದಾರ ಜೋಯಿ ಅವರು ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಿದ್ದಾರೆ. ರಸ್ತೆ ಅಭಿವೃದ್ಧಿಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸ್ಥಳೀಯ ಗ್ರಾಮಸ್ಥರು ಹಾಗೂ ವಿವಿಧ ಕುಟುಂಬಸ್ಥರು ಇದೇ ಸಂದರ್ಭ ಹೇಳಿದರು.