ಕುಶಾಲನಗರ ಮೇ 9 NEWS DESK : ಇಂದಿನ ಕಾಲಘಟ್ಟದಲ್ಲಿ ಎಳೆಯ ಪ್ರಾಯದ ಮಕ್ಕಳಿಗೆ ಬಸವಾದಿ ಶರಣರು ಆದರ್ಶವಾಗಬೇಕು ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶಿಸಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವ ಜಯಂತಿ ಆಂಗವಾಗಿ ಹುಲುಸೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನ ವಚನಗಳ ಸಾರವನ್ನು ಅರಿಯುವ ಮೂಲಕ ಮನುಷ್ಯ ಬಾಹ್ಯಕ್ಕಿಂತ ಅಂತರಂಗದ ಬದುಕಿಗೆ ಹೆಚ್ಚು ಒತ್ತು ನೀಡಬೇಕು. ಯಾರನ್ನೂ ಕೂಡ ದ್ವೇಷಿಸದ, ಯಾರನ್ನೂ ಟೀಕಿಸದ ಬದುಕನ್ನು ಕಟ್ಟಲು ವಚನ ಸಾಹಿತ್ಯ ಉಪಕಾರಿ ಎಂದು ಶ್ರೀಗಳು ಹೇಳಿದರು.
ಬಸವ ಜಯಂತಿ ಕುರಿತಾಗಿ ಪ್ರವಚನ ನೀಡಿದ ಹೆಬ್ಬಾಲೆ ಪ್ರೌಢಶಾಲೆ ಉಪನ್ಯಾಸಕ ಮೆ.ನಾ.ವೆಂಕಟನಾಯಕ್, ಹನ್ನೆರಡನೇ ಶತಮಾನದಲ್ಲಿ ಅಂದಿನ ಸಮಾಜದಲ್ಲಿದ್ದ ಮೇಲು ಕೀಳೆಂಬ ಬೇಧಗಳನ್ನು ತೊಡೆದು ಹಾಕಿ ಸಮಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದ ಬಸವಾದಿ ಶರಣರ ಚಿಂತನೆಗಳು ಇಂದಿನ ಸಮಾಜಕ್ಕೆ ಅತೀ ಮುಖ್ಯವಾಗಿವೆ. ತಾಯಂದಿರು ತಾವು ಕಲಿಯುವ ಮೂಲಕ ಮಕ್ಕಳಿಗೆ ವಚನಗಳನ್ನು ಕಲಿಸುವಂತಾಗಬೇಕು ಎಂದು ವೆಂಕಟನಾಯಕ್ ವಚನಗಳ ಬೋಧೆಯ ಮೂಲಕ ನಿರೂಪಿಸಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಕಣಿವೆ ಭಾರದ್ವಾಜ್ ಮಾತನಾಡಿ, ಇಂದು ತಾಯಂದಿರು ಹಾಗೂ ಮಕ್ಕಳು ಬಹು ಮುಖ್ಯವಾಗಿ ಬಸವಣ್ಣನವರು ಬರೆದ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನವೊಂದರ ಸಾರವರಿತು ಅದರಂತೆ ಬದುಕಿದಲ್ಲಿ ಇಡೀ ಜೀವನವೇ ಪಾವನವಾಗುತ್ತದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಆಶಯ ನುಡಿಗಳಾಡಿದರು. ಜಿಲ್ಲಾ ಪರಿಸರವಾದಿ ಟಿ.ಜಿ.ಪ್ರೇಮಕುಮಾರ್, ಹಿರಿಯ ನಿವಾಸಿ ಕಾಳಪ್ಪ, ಕೃಷಿಕ ಸಂಪತ್ತು ಇದ್ದರು. ವಿದ್ಯಾರ್ಥಿನಿ ಐಶ್ವರ್ಯ ವಚನಗಳನ್ನು ಹಾಡಿದರು.