ಸೋಮವಾರಪೇಟೆ, ಮೇ 9 NEWS DESK : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಓರ್ವ ವಿದ್ಯಾರ್ಥಿನಿ ಯು.ಎಸ್.ಮೀನ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ತಾಲ್ಲೂಕಿನ ಕುಗ್ರಾಮಗಳಲ್ಲಿ ಒಂದಾದ ಸೂರ್ಲಬ್ಬಿ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿ ಮಾತ್ರ ಕಲಿಯುತ್ತಿದ್ದಳು ಎಂದು ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ತಿಮ್ಮಪ್ಪ ಅಂಡರದಾನಿ ತಿಳಿಸಿದ್ದಾರೆ. ಈ ಗ್ರಾಮದ ಜನರು ಬೆಂಗಳೂರು ಇತ್ಯಾದಿ ಕಡೆ ಉದ್ಯೋಗ ಅರಸಿತೆರಳುತ್ತಿರುವುದರಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀವ್ರವಾಗಿ ಕುಸಿದಿದೆ.
ಬರುವ ಶೈಕ್ಷಣಿಕ ವರ್ಷಕ್ಕೆ ಎಸ್‍ಎಸ್‍ಎಲ್‍ಸಿ ತರಗತಿಗೆ ನಾಲ್ಕು ಮಕ್ಕಳು ಹಾಗೂ 9ನೇ ತರಗತಿ ಮತ್ತು 8ನೇ ತರಗತಿಗೆ ತಲಾ 3 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು, ಒಟ್ಟು 10 ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ.
ಈ ಶಾಲೆಯು ಸೋಮವಾರಪೇಟೆ ತಾಲ್ಲೂಕಿನ ಗಡಿಯಲ್ಲಿದ್ದು, ನೆರೆಯ ಮಡಿಕೇರಿ ತಾಲ್ಲೂಕಿನ ಮುಟ್ಲು, ಹಮ್ಮಿಯಾಲ, ಮಂಕ್ಯ, ಕುಂಬಾರಗಡಿ ಭಾಗದಿಂದ
ವಿದ್ಯಾರ್ಥಿಗಳು ಈ ಶಾಲೆಗೆ ಬರಲಿದ್ದಾರೆ. ಏಕೈಕ ವಿದ್ಯಾರ್ಥಿಯನ್ನು ಹೊಂದಿದ್ದ ಈ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ತೇರ್ಗಡೆಯಾಗಿರುವುದು ಶಿಕ್ಷಣ ಇಲಾಖೆಗೆ ಪುಷ್ಠಿ ನೀಡಿದೆ ಎಂದು ಹೇಳಲಾಗುತ್ತಿದೆ. ಶಾಲೆಯಲ್ಲಿ ಕಳೆದ ವರ್ಷ 8, 9 ಮತ್ತು 10 ನೇ ತರಗತಿಗಳಿಂದ ಒಟ್ಟು ಏಳು ವಿದ್ಯಾರ್ಥಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದರು.