ಮಡಿಕೇರಿ ಮೇ 9 NEWS DESK : ಕಾವೇರಿನಾಡು ಕೊಡಗಿನಲ್ಲಿ ಒಂದೆರಡು ಮಳೆಯಾದರೂ ಕಾದಿರುವ ಭೂಮಿ ತಣ್ಣಗಾಗುತ್ತಿಲ್ಲ. ಅತಿರೇಕದ ತಾಪಮಾನದಿಂದ ಮನುಷ್ಯರು ಮಾತ್ರವಲ್ಲದೆ ವನ್ಯಜೀವಿಗಳು ಕೂಡ ನೀರು, ನೆರಳಿಗಾಗಿ ಪರಿತಪಿಸುತ್ತಿವೆ. ಮನೆಯ ಸುತ್ತಮುತ್ತ ತಂಪು ಪ್ರದೇಶದಲ್ಲಿ ವಿಷ ಜಂತುಗಳು ಆಶ್ರಯ ಪಡೆಯುತ್ತಿರುವುದು ಸಹಜವಾಗಿದ್ದು, ಜನ ಎಚ್ಚರ ವಹಿಸುವುದು ಅಗತ್ಯವಾಗಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದೆ, ಹಿರಿಯರ ಅನುಭವದ ಪ್ರಕಾರ ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ಈ ಬಾರಿಯ ಉಷ್ಣತೆ ದಾಖಲೆಯನ್ನು ಬರೆದಿದೆ. ಅತ್ಯಂತ ಕೂಲ್ ಆಗಿರುತ್ತಿದ್ದ ಕೊಡಗು ಈಗ ಬೇರೆ ಯಾವುದೇ ಜಿಲ್ಲೆಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಕುದಿಯುತ್ತಿದೆ. ನಗರ, ಪಟ್ಟಣದಲ್ಲಿ ಕುಡಿಯುವ ನೀರಿಗೂ ಕೊರತೆ ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ಕೆರೆಗಳು ಬತ್ತಿ ಹೋಗಿದೆ. ಮರಗಳು ಒಣಗಿ ನೆರಳೂ ಕೂಡ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು, ನೆರಳು ಇರುವ ಪ್ರದೇಶಗಳೆಡೆಗೆ ವಿಷ ಜಂತುಗಳು ಹಾಗೂ ವನ್ಯಜೀವಿಗಳು ಮುಖ ಮಾಡುತ್ತಿವೆ. ಹೆಚ್ಚಾಗಿ ಹಾವುಗಳು ಮನೆಯಂಗಳ, ಹೂದೋಟ, ಕಾಫಿ ತೋಟ, ತೋಟದ ಮನೆ, ಶೆಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನೆರಳು ಮತ್ತು ತಂಪಿನ ವಾತಾವರಣ ಇರುವ ಸ್ಥಳಗಳನ್ನು ಇವುಗಳು ಹುಡುಕಿಕೊಂಡು ಬರುತ್ತಿವೆ. ಶೆಖೆ ಎಂದು ರಾತ್ರಿ ವೇಳೆ ಮನೆಯ ಕಿಟಕಿಗಳನ್ನು ತೆರೆದಿಟ್ಟು ಮಲಗುವವರೂ ಇದ್ದಾರೆ. ಈ ರೀತಿ ಮಾಡುವುದು ಸುರಕ್ಷಿತವಲ್ಲ, ಹಾವುಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ತೋಟ ಮತ್ತು ಮನೆಯ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸಿ ಹೆಜ್ಜೆ ಇಡುವುದು ಸೂಕ್ತ. ಹಾವುಗಳು ಕಂಡು ಬಂದರೆ ಯಾವುದೇ ರೀತಿಯಲ್ಲಿ ಹಾನಿ ಮಾಡದೆ ಉರಗ ಪ್ರೇಮಿಗಳಿಗೆ ಕರೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಳ್ಳುವುದು ಉತ್ತಮ.
ಉಷ್ಣಾಂಶ ಹೆಚ್ಚಾಗುತ್ತಲೇ ಇರುವುದರಿಂದ ಅರಣ್ಯ ಮತ್ತು ತೋಟದ ಸಮೀಪದ ನಿವಾಸಿಗಳು ಹಾವು ಸೇರಿದಂತೆ ವಿಷ ಜಂತುಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಮತ್ತೊಂದೆಡೆ ಕಾಡಾನೆಗಳು ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಈ ಕಾರಣದಿಂದ ತೋಟಗಳೆಡೆಗೆ ಆನೆಗಳು ಬರುತ್ತಿದ್ದು, ಆತಂಕವನ್ನು ಸೃಷ್ಟಿಸುತ್ತಿವೆ. ಹಾಡಹಗಲೇ ನಡು ರಸ್ತೆಯಲ್ಲಿ ಗಜ ಹಿಂಡು ಕಾಣಿಸಿಕೊಳ್ಳುತ್ತಿದೆ. ಮುಂಜಾನೆ ಮತ್ತು ರಾತ್ರಿ ವೇಳೆಯಲ್ಲಿ ಕೂಡ ದಿಢೀರ್ ಆಗಿ ಪ್ರತ್ಯಕ್ಷವಾಗುತ್ತಿವೆ. ವಾಹನಗಳ ಮೇಲೆ ದಾಳಿ ಮಾಡುತ್ತಿವೆ. ಆದ್ದರಿಂದ ಜನ ಕಾಡಾನೆಗಳ ಬಗ್ಗೆಯೂ ಎಚ್ಚರಿಕೆಯಿಂದ ಇರುವುದು ಸೂಕ್ತ. ಅರಣ್ಯ ವ್ಯಾಪ್ತಿಯ ರಸ್ತೆಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ರಾತ್ರಿಯ ವೇಳೆಯಲ್ಲಿ ಸಂಚಾರ ಮಾಡದಿರುವುದು ಹಾಗೂ ನಸುಕಿನಲ್ಲಿ ವಾಯು ವಿಹಾರಕ್ಕೆ ಹೋಗದೆ ಇರುವುದು ಒಳಿತು.
ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗಗಳ ಹಾವಳಿಯೂ ಅಧಿಕವಾಗಿದೆ. ಮನೆಯಂಗಳ ಮತ್ತು ಮೇಲ್ಚಾವಣಿಗೆ ಲಗ್ಗೆ ಇಡುತ್ತಿರುವ ಮಂಗಗಳು ಕುಡಿಯುವ ನೀರಿಗಾಗಿ ಹುಡುಕಾಡುತ್ತಿವೆ. ಈ ಸಂದರ್ಭ ತಿನ್ನಬಹುದಾದ ವಸ್ತುಗಳನ್ನು ತಿಂದು ತೇಗುತ್ತಿವೆ, ಒಣಗಲು ಹಾಕಿದ ಬಟ್ಟೆಗಳಿಗೆ ಹಾನಿ ಮಾಡುತ್ತಿವೆ. ತೋಟಗಳಿಗೆ ನುಗ್ಗಿ ಕೃಷಿ ಫಸಲು ಮತ್ತು ಹಣ್ಣುಗಳನ್ನು ತಿನ್ನುತ್ತಿವೆ. ಒಟ್ಟಿನಲ್ಲಿ ಜಿಲ್ಲೆಯ ಜನ ಹಾಗೂ ಕೃಷಿಕ ವರ್ಗ ಅತಿರೇಕದ ಉಷ್ಣಾಂಶದೊಂದಿಗೆ ನೀರು, ಆಹಾರಕ್ಕಾಗಿ ಹವಣಿಸುತ್ತಿರುವ ವನ್ಯಜೀವಿಗಳ ಉಪಟಳವನ್ನು ಕೂಡ ಸಹಿಸಿಕೊಳ್ಳಬೇಕಾಗಿದೆ.
ವರದಿ : ಅಂಚೆಮನೆ ಸುಧಿ