ಸೋಮವಾರಪೇಟೆ ಮೇ 9 NEWS DESK : ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರಪೇಟೆ ತಾಲ್ಲೂಕಿಗೆ ಶೇ. 92.47 ರಷ್ಟು ಫಲಿತಾಂಶ ಲಭಿಸಿದೆ.
2,353 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2176 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1227 ಬಾಲಕಿಯರು ಮತ್ತು 1126 ಬಾಲಕರು ಪರೀಕ್ಷೆ ಬರೆದಿದ್ದರು.
ತಾಲ್ಲೂಕಿನ 33 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಣಿಮರೂರು ಸರ್ಕಾರಿ ಪ್ರೌಢಶಾಲೆ, ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆ, ಅಂಕನಳ್ಳಿ ಸರ್ಕಾರಿ ಪ್ರೌಢಶಾಲೆ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಆಂಗ್ಲಮಾಧ್ಯಮ ಪ್ರೌಢಶಾಲೆ, ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಾಂತಿನೀಕೇತನ ಪ್ರೌಢಶಾಲೆ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ, ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ, ಚೌಡ್ಲು ಜ್ಞಾನವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅಂಕನಳ್ಳಿ ಸೆಂಟ್‍ಆನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಕಿರಗಂದೂರು ಸರ್ಕಾರಿ ಪ್ರೌಢಶಾಲೆ, ನೆಲ್ಲಿಹುದಿಕೇರಿ ಆಂಗ್ಲೋ ವರ್ಣಾಕುಲರ್ ಆಂಗ್ಲಮಾಧ್ಯಮ ಪೌಢಶಾಲೆ, ನಿಡ್ತ ಸರ್ಕಾರಿ ಪ್ರೌಢಶಾಲೆ, ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ, ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಆಲೂರು ಸಿದ್ದಾಪುರ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ ಮೋರಾರ್ಜಿ ದೇಸಾಯಿ ವಸತಿ ಶಾಲೆ, ದೊಡ್ಡಕೊಡ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಟ್ಟಿಹೊಳೆ ನಿರ್ಮಲ ವಿದ್ಯಾಭವನ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಕೊಡ್ಲಿಪೇಟೆ ಶ್ರೀಸದಾಶಿವ ಸ್ವಾಮೀಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಶಾಲನಗರ ಜ್ಞಾನಭಾರತಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಗಂಧದಕೋಟೆ ಕೆಎಂಟಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಮಸಗೋಡು ಆಂಗ್ಲಮಾಧ್ಯಮ ಶಾಲೆ, ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಸ್ಕೂಲ್, ಕೂಡ್ಲೂರ್ ಯೂನಿಕ್ ಆಕಾಡೆಮಿ ಪ್ರೌಢಶಾಲೆ, ಸೋಮವಾರಪೇಟೆ ಓಎಲ್‍ವಿ ಪ್ರೌಢಶಾಲೆ, ಆಲೂರು ಸಿದ್ದಾಪುರ ಜಾನಕಿ ಕಾಳಪ್ಪ ಪ್ರೌಢಶಾಲೆ, ಶನಿವಾರಸಂತೆ ಸುಪ್ರಜಾ ಗುರುಕುಲ ಆಂಗ್ಲಮಾಧ್ಯಮ ಪ್ರೌಢಶಾಲೆ, ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಬೊಳ್ಳೂರು ಉದ್ಗಾಂ ಶಾಲೆ, ಶನಿವಾರಸಂತೆ ಶ್ರೀವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆ ಶೇ.100ರ ಫಲಿತಾಂಶ ಪಡೆದಿವೆ.
ತಾಲ್ಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಓರ್ವ ವಿದ್ಯಾರ್ಥಿನಿ ಯು.ಎಸ್.ಮೀನಾ 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದವ ಮೂಲಕ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಅತೀ ಹೆಚ್ಚು ಮಳೆಬೀಳುವ, ಪಶ್ಚಿಮಘಟ್ಟ ತಪ್ಪಲಿನಲ್ಲಿರುವ ಸೂರ್ಲಬ್ಬಿ ಗ್ರಾಮದ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿ ಮಾತ್ರ ಕಲಿಯುತ್ತಿದ್ದಳು. ಮುಟ್ಲು ಗ್ರಾಮದಿಂದ 5ಕಿ.ಮೀ. ಕಾಲ್ನಡಿಗೆಯಲ್ಲೇ ವಿದ್ಯಾರ್ಥಿನಿ ಶಾಲೆಗೆ ಬರುತ್ತಿದ್ದಳು ಎಂದು ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ತಿಮ್ಮಪ್ಪ ಅಂಡರದಾನಿ ತಿಳಿಸಿದ್ದಾರೆ.
ಮೂಲ ಸೌಲಭ್ಯಗಳ ಕೊರತೆಯಿಂದ ಸೂರ್ಲಬ್ಬಿ ಸುತ್ತಮುತ್ತಲಿನ ಗ್ರಾಮದ ಜನರು ನಗರ ಪ್ರದೇಶಗಳಿಗೆ ತೆರಳಿ ನೌಕರಿ ಮಾಡುತ್ತಿದ್ದಾರೆ. ವಯಸ್ಸಾದವರು ಮಾತ್ರ ಗ್ರಾಮದಲ್ಲಿ ವಾಸವಾಗಿದ್ದಾರೆ. ಈ ಕಾರಣದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀವ್ರವಾಗಿ ಕುಸಿದಿದೆ.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಸ್‍ಎಸ್‍ಎಲ್‍ಸಿ ತರಗತಿಗೆ ನಾಲ್ಕು ಮಕ್ಕಳು ಹಾಗೂ 9ನೇ ತರಗತಿ ಮತ್ತು 8ನೇ ತರಗತಿಗೆ ತಲಾ 3 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು, ಒಟ್ಟು 10 ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ.
ಈ ಶಾಲೆಯು ಸೋಮವಾರಪೇಟೆ ತಾಲ್ಲೂಕಿನ ಗಡಿಯಲ್ಲಿದ್ದು, ನೆರೆಯ ಮಡಿಕೇರಿ ತಾಲ್ಲೂಕಿನ ಮುಟ್ಲು, ಹಮ್ಮಿಯಾಲ, ಮಂಕ್ಯ, ಕುಂಬಾರಗಡಿ ಭಾಗದ ವಿದ್ಯಾರ್ಥಿಗಳಿಗಾಗಿ ಈ ಶಾಲೆಗೆ ತೆರೆಯಲಾಗಿತ್ತು.
ಈ ಹಿಂದೆ ಗ್ರಾಮಗಳಿಗೆ ಬಸ್‍ನ ಸೌಕರ್ಯ ಇರಲಿಲ್ಲ. ವಿದ್ಯಾರ್ಥಿಗಳು ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಕಳೆದ ಒಂದು ದಶಕದಿಂದ ಒಂದು ಸರ್ಕಾರಿ ಬಸ್ ಸೂರ್ಲಬ್ಬಿ ಮಾರ್ಗದಲ್ಲಿ ಸಂಚರಿಸುತ್ತಿದೆ. ಶಾಲೆಯಲ್ಲಿ ಕಳೆದ ವರ್ಷ 8, 9ನೇ ತರಗತಿಗಳಿಂದ ಒಟ್ಟು 6 ವಿದ್ಯಾರ್ಥಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದರು. ಸೂಕ್ತ ಸೌಲಭ್ಯಗಳ ಕೊರತೆಯಿಂದ ಈ ಶಾಲೆಗೆ ಶಿಕ್ಷಕರು ಹೋಗಲು ಹಿಂದೇಟು ಹಾಕುತ್ತಾರೆ. ರಾಜಕೀಯ ಪ್ರಭಾವವಿಲ್ಲದ ದೂರದ ಜಿಲ್ಲೆಯಿಂದ ವರ್ಗಾವಣೆಗೊಂಡ ಶಿಕ್ಷಕರು ಮಾತ್ರ ಕೆಲಸ ಮಾಡುತ್ತಾರೆ.