ಮಡಿಕೇರಿ ಮೇ 11 NEWS DESK : ಅಧಿಕ ತಾಪಮಾನದಿಂದ ಕಂಗಾಲಾಗಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ಜನರು ಹಾಗೂ ಕೃಷಿಕ ವರ್ಗ ನಿಟ್ಟುಸಿರು ಬಿಡುವಂತಾಗಿದೆ.
ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಸಮುದಾಯ ಹಾಗೂ ಜಾನುವಾರುಗಳಿಗೆ ಮಳೆರಾಯನ ಆಗಮನ ಸಂತಸ ಮೂಡಿಸಿದೆ.
ಕೂಡಿಗೆಯ ವ್ಯಾಪ್ತಿಯಲ್ಲಿ ಮುಂಜಾನೆ ಕೆಲಹೊತ್ತು ಬಿಸಿಲಿನ ವಾತಾವರಣ ಇತ್ತಾದರೂ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಕಂಡುಬಂದಿತು. ಸಂಜೆ ಆರು ಗಂಟೆಯ ನಂತರ ಬಿರುಗಾಳಿ ಸಹಿತ ಆರಂಭವಾದ ಮಳೆಗೆ ಕೂಡಿಗೆಯಲ್ಲಿ ನಡೆಯುವ ಸಂತೆ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ನಿರಂತರವಾದ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಮನೆಒಳಗೆ ನೀರು ನುಗ್ಗುವ ಆತಂಕ ಎದುರಾಗಿತ್ತು.
ವರದಿ : ಕೆ.ಆರ್.ಗಣೇಶ್-ಕೂಡಿಗೆ