ಮಡಿಕೇರಿ ಮೇ 12 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಅಂತಿಮ ಪಂದ್ಯಾಟದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ 28 ರನ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೂರ್ಗ್ ಯುನೈಟೆಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಟಾಸ್ ಗೆದ್ದ ಕೂರ್ಗ್ ಯುನೈಟೆಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 10 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 117 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 89 ರನ್ ಗಳನ್ನು ಗಳಿಸಿ ಸೋಲು ಒಪ್ಪಿಕೊಂಡಿತು.
ಕೂರ್ಗ್ ಬ್ಲಾಸ್ಟರ್ಸ್ ತಂಡದ ಆಟಗಾರ ಸಿ.ಎ.ಕಾರ್ತಿಕ್ 35 ಬಾಲ್ ಗಳಲ್ಲಿ 95 ರನ್ ಗಳನ್ನು ಸಿಡಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಚಾAಪಿಯನ್ ತಂಡ ಕೂರ್ಗ್ ಬ್ಲಾಸ್ಟರ್ಸ್ ಗೆ 1.50 ಲಕ್ಷ ರೂ. ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕೂರ್ಗ್ ಯುನೈಟೆಡ್ ತಂಡಕ್ಕೆ 75 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು.
ಕೂರ್ಗ್ ಯುನೈಟೆಡ್ ತಂಡದ ಚೋನೀರ ಆರ್. ಅಯ್ಯಪ್ಪ 315 ರನ್, 6 ವಿಕೆಟ್ ಸಾಧನೆಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಉತ್ತಮ ಬ್ಯಾಟರ್ ಪ್ರಶಸ್ತಿಗೂ ಭಾಜನರಾದರು. ಕೂರ್ಗ್ ಬ್ಲಾಸ್ಟರ್ಸ್ ತಂಡದ ಕೋದಂಡ ಎ.ಕಾರ್ತಿಕ್ ಅಂತಿಮ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು. ರಾಯಲ್ ಟೈಗರ್ಸ್ ಆಟಗಾರ ಧ್ಯಾನ್ ಅಯ್ಯಪ್ಪ ಭವಿಷ್ಯದ ಆಟಗಾರ, 8 ವಿಕೆಟ್ ಸಾಧನೆಯೊಂದಿಗೆ ಕೊಡವ ವಾರಿಯರ್ಸ್ ತಂಡದ ಪಿ. ಟಿ. ಪೂವಯ್ಯ ಉತ್ತಮ ಬೌಲರ್, ಕೂರ್ಗ್ ಬ್ಲಾಸ್ಟರ್ಸ್ ತಂಡದ ಎಂ.ಎ.ತಿಮ್ಮಯ್ಯ ಉತ್ತಮ ವಿಕೆಟ್ ಕೀಪರ್, ಎಂಟಿಬಿ ತಂಡದ ಶಿಪ್ರಜ್ ಸೋಮಣ್ಣ ಬೆಸ್ಟ್ ಕ್ಯಾಚ್, ವೈಲ್ಡ್ ಫ್ಲವರ್ ತಂಡ ಶಿಸ್ತಿನ ತಂಡ ಪ್ರಶಸ್ತಿ ಪಡೆದುಕೊಂಡಿತು.
ಇದಕ್ಕೂ ಮೊದಲು ಇಂದು ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೊಡವ ವಾರಿಯರ್ಸ್ 9 ವಿಕೆಟ್‌ಗಳ ಜಯ ಸಾಧಿಸಿ ಕೊಡವ ಟ್ರೈಬ್ಸ್ ತಂಡವನ್ನು ಮಣಿಸಿತು.
ಟಾಸ್ ಗೆದ್ದ ಕೊಡವ ಟ್ರೈಬ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 10 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 70 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕೊಡವ ವಾರಿಯರ್ಸ್ ತಂಡ 9.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ದಾಖಲಿಸಿ ಗೆಲುವು ಸಾಧಿಸಿತು.
ಕೊಡವ ವಾರಿಯರ್ಸ್ ತಂಡದ ಆಟಗಾರ ಚರಿತ್ ಕುಟ್ಟಪ್ಪ ಅವರು 31 ಬಾಲ್ ಗಳಲ್ಲಿ 42 ರನ್ ಗಳನ್ನು ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ಕೊಡವ ವಾರಿಯರ್ಸ್ ವಿರುದ್ಧ 23 ರನ್ ಗಳ ಜಯ ಸಾಧಿಸಿತು.
ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 10 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 80 ರನ್ ಗಳನ್ನು ಗಳಿಸಿತು. ಕೊಡವ ವಾರಿಯರ್ಸ್ 10 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 57 ರನ್ ಗಳನ್ನು ಗಳಿಸಿ ಸೋಲು ಒಪ್ಪಿಕೊಂಡಿತು.
ಕೂರ್ಗ್ ಬ್ಲಾಸ್ಟರ್ಸ್ ತಂಡದ ಕಾರ್ತಿಕ್ ಸಿ.ಎ 18 ಬಾಲ್ ಗಳಲ್ಲಿ 35 ರನ್ ಗಳನ್ನು ಬಾರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.