ಮಡಿಕೇರಿ ಮೇ 27 NEWS DESK : ಸಂಸ್ಕೃತಿಯ, ಪರಂಪರೆ, ಪದ್ಧತಿ ಮತ್ತು ಆಚಾರ ವಿಚಾರಗಳು ಉಳಿಯಬೇಕಾದರೆ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಅಗತ್ಯವಾಗಿದೆ ಎಂದು ಸಾಹಿತಿ ಪಿ.ಎಸ್.ವೈಲೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 91ನೇ ಪುಸ್ತಕ, ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಅವರ 3ನೇ ಪುಸ್ತಕ “ತಾಳ್ಮೆರ ತಾವರೆ”ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ ಇಂದಿಗೂ ಶ್ರೀಮಂತವಾಗಿರಲು ಸಾಹಿತ್ಯವೇ ಕಾರಣ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗಿನ ಗೌರಮ್ಮ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರ ಹೆಸರು, ಖ್ಯಾತಿ ಉಳಿದುಕೊಂಡಿರುವುದು ಸಾಹಿತ್ಯದಿಂದ ಎಂದರು.
ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳೇ ಇಲ್ಲ ಎಂಬ ಕಾಲಘಟ್ಟವಿತ್ತು. ಆದರೆ ಇಂದು ಜಿಲ್ಲೆಯಲ್ಲ್ಲಿ ಸಾಹಿತ್ಯದ ಸುವರ್ಣಕಾಲ ಆರಂಭವಾಗಿದೆ. ಆದರೆ ನೈಜ ಸಾಧಕರು ಮೂಲೆ ಗುಂಪಾಗುತ್ತಿದ್ದು, ಎಲ್ಲರನ್ನೂ ಗುರುತಿಸುವ ಕೆಲಸ ಆಗಬೇಕು. ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾರ್ಥ ಸಾಧನೆ ಸೇರಿಕೊಂಡಿರುವುದು ಬೇಸರ ಸಂಗತಿ, ನಿಜವಾದ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸಾಹಿತ್ಯ ಎಲ್ಲಾ ಪದ್ಧತಿ, ಪ್ರಕಾರಗಳನ್ನು ಉಳಿಸುತ್ತದೆ. ಕನ್ನಡ ಭಾಷೆಯ ಸಹೋದರಿ ಭಾಷೆ ಕೊಡವ ಭಾಷೆಯಲ್ಲಿ ಸಾಹಿತ್ಯದ ಬೆಳವಣಿಗೆ ಇಲ್ಲದ ಕಾಲದಲ್ಲಿ ಸಂಘ, ಸಂಸ್ಥೆಗಳು, ಪತ್ರಿಕೆಗಳು ಕೊಡವ ಸಾಹಿತ್ಯವನ್ನು ಮೇರು ಮಟ್ಟದಲ್ಲಿ ತಂದಿರಿಸಿವೆ. ಇಂತಹ ಸಾಹಿತ್ಯ ಸೇವೆಗೆ ಒತ್ತಾಸೆ ನೀಡಿದವರಲ್ಲಿ ಕೊಡವ ಮಕ್ಕಡ ಕೂಟವು ಒಂದು. ಪುಸ್ತಕವನ್ನು ಮುದ್ರಿಸಿ ಪ್ರಕಟಿಸುವುದು ಸವಾಲಿನ ಕೆಲಸ, ಅದನ್ನು ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾಡುತ್ತಿದ್ದು, 100ನೇ ಪುಸ್ತಕಕ್ಕೆ ನೂರು ಲೇಖಕಕರ ಬರಹವನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸುವುದು ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಎಂದು ವೈಲೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚಮಂಡ ಗೌರಮ್ಮ ಮಾದಮ್ಮಯ್ಯ, “ತಾಳ್ಮೆರ ತಾವರೆ” ಪುಸ್ತಕದ ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ವಿಶೇಷ ಚೇತನಳಾಗಿ, ಮನೆಯಲ್ಲೇ ಅಕ್ಷರಾಭ್ಯಾಸ ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಶುಭ ಹಾರೈಸಿದರು.
“ತಾಳ್ಮೆರ ತಾವರೆ” ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಮಾತನಾಡಿ, ತಾಳ್ಮೆರ ತಾವರೆ ಪುಸ್ತಕವು ಕಾವೇರಿ ಮಾತೆ, ಗಿಡ, ಪ್ರಕೃತಿ, ಪ್ರಾಣಿ, ಪಕ್ಷಿ, ಆಸೆ, ಭಾಷೆ, ಸುಖ, ದು:ಖ, ನೋವು, ನಲಿವು, ತಂದೆ, ತಾಯಿಗೆ ಸಂಬಂಧಿಸಿದಂತೆ 201 ಕವನಗಳನ್ನು ಹೊಂದಿದೆ. ಹಿರಿಯ ಕವಿ, ಸಾಹಿತಿಗಳ ಪುಸ್ತಕಗಳನ್ನು ಓದಬೇಕು, ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ಮೌಲ್ಯಯುತ ಬರಹಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಮೂಲೆ ಗುಂಪಾಗಿಸದೆ ಪ್ರತಿಯೊಬ್ಬರು ಓದಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಸಾಹಿತಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದ ಅವರು, ಮತ್ತಷ್ಟು ಪುಸ್ತಕಗಳನ್ನು ಹೊರತರುವ ಹಂಬಲವಿದೆ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಲಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕøತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಕೊಡವ ಮಕ್ಕಡ ಕೂಟ ಈಗಾಗಲೇ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 91 ಕೃತಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
100 ಬರಹಗಾರರ ಲೇಖನವನ್ನೊಳಗೊಂಡ ನೂರನೇ ಪುಸ್ತಕವನ್ನು ಹೊರ ತರಲು ಕೂಟ ಸಿದ್ಧತೆ ನಡೆಸಿದ್ದು, ಬರಹಗಾರರು ಬರಹ ಕಳುಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೂಪದಿರ ಗೊಂಬೆ ಉತ್ತಪ್ಪ ಹಾಗೂ ಕೂಪದಿರ ಜುನಾ ವಿಜಯ್ ಉಪಸ್ಥಿತರಿದ್ದರು.
:: ಬರಹಗಾರರ ಪರಿಚಯ ::
:: ಚೀರಮ್ಮನ ವಾಣಿ ಚಂಗುವಮ್ಮಯ್ಯ ::
ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯ ಕೊಳಗದಾಳು ಗ್ರಾಮದ ಚೀರಮ್ಮನ ಎಂ.ಚಂಗುವಮ್ಮಯ್ಯ ಮತ್ತು ಪಾರ್ವತಿ ದಂಪತಿಯ ಮಗಳಾದ ಚೀರಮ್ಮನ ವಾಣಿ ಚಂಗುವಮ್ಮಯ್ಯ. ಹುಟ್ಟಿನಿಂದಲೇ ವಿಶೇಷ ಚೇತನರಾಗಿದ್ದು, ಶಾಲೆಗೆ ತೆರಳಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಮನೆಯಲ್ಲೇ ಅಕ್ಷರಭ್ಯಾಸ ಮಾಡಿ ಕಥೆ, ಕವನ, ಚುಟುಕು ಬರೆಯುವ ಮೂಲಕ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
ಇವರು ಬರೆದ ಕಥೆ, ಕವನ, ಚುಟುಕ ಕೊಡವ ಸಾಹಿತ್ಯ ಅಕಾಡೆಮಿಯು ಬಿಡುಗಡೆಗೊಳಿಸಿದ “ಪೋಗುರಿ” ಸಂಚಿಕೆಯಲ್ಲಿ ಪ್ರಕಟವಾಗಿದ್ದು, 500ಕ್ಕೂ ಹೆಚ್ಚು ಕವನವನ್ನು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಬರೆದಿದ್ದಾರೆ. ಅಲ್ಲದೇ ತಾನೇ ರಾಗ ಸಂಯೋಜನೆ ಮಾಡಿ ತಾವೇ ಸ್ವತಃ ಹಾಡುವುದು ಇವರ ಅವ್ಯಾಸ. ಇವರು ರೆಡಿಯೋ ಕಾರ್ಯಕ್ರಮ, ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು, ವಾಣಿ ಅವರ ವಿಶೇಷ ಸಾಧನೆಯನ್ನು ಗುರುತಿಸಿ ವಿವಿಧ ಸಂಘ, ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿದೆ. ಇವರ ಚಂಗುತಮ್ಮಯ್ಯ 2014 ರಿಂದ 2017ರ ವರೆಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.
‘ಬಾವನೆಲ್ ಪಬ್ಬ್‍ನ ಬಳ್ಳಿ’ ಎನ್ನುವ ಕೊಡವ ಭಾಷೆಯಲ್ಲಿ ಬರೆದ ಕವನ ಪುಸ್ತಕ ಮತ್ತು ಕನ್ನಡ ಭಾಷೆಯ ‘ತಾಳ್ಮೆಯ ಚಿಗುರು’ ಎನ್ನುವ ಎರಡು ಪುಸ್ತಕ ಈಗಾಗಲೇ ಬಿಡುಗಡೆಗೊಂಡಿದ್ದು, “ತಾಳ್ಮೆರ ತಾವರೆ” ಇದು ಇವರ 3ನೇ ಪುಸ್ತಕವಾಗಿದೆ.