ಮಡಿಕೇರಿ ಮೇ 27 NEWS DESK : ದಕ್ಷಿಣದ ಕಾಶ್ಮೀರವೆಂದೇ ಖ್ಯಾತಿ ಹೊಂದಿರುವ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಅಪಾಯದಂಚಿನ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ನಿರ್ಲಕ್ಷ್ಯದ ನಡೆ ಅಪಾಯವನ್ನು ಆಹ್ವಾನಿಸುತ್ತಿದೆ.
ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ರಸ್ತೆ ಕಡೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಪ್ರದೇಶ ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜಾಸೀಟು ಉದ್ಯಾನವನದ ಬೆಟ್ಟದ ಕೆಳಗಿರುವ ಈ ತಡೆಗೋಡೆಯ ಅಸುರಕ್ಷಿತ ಪ್ರದೇಶ ಸಾವಿರ ಅಡಿಗೂ ಹೆಚ್ಚು ಪ್ರಪಾತವನ್ನೂ ಹೊಂದಿದೆ. ಇದರ ಅರಿವೇ ಇಲ್ಲದ ಪ್ರವಾಸಿಗರು ಇಲ್ಲಿ ನಿಂತು ತಮ್ಮ ಮೊಬೈಲ್ ಕ್ಯಾಮರಾಗಳ ಮೂಲಕ ಪರಿಸರದ ಸೊಬಗನ್ನು ಸೆರೆ ಹಿಡಿಯುತ್ತಿದ್ದಾರೆ, ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅಪಾಯದ ಪರಿವಿಲ್ಲದ ಪ್ರವಾಸಿಗರ ಈ ನಡೆ ಅತ್ಯಂತ ಅಜಾಗರೂಕತೆಯಿಂದ ಕೂಡಿದೆ.
ಕೆಲವರು ತಡೆಗೋಡೆ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿದರೆ ಮತ್ತೆ ಕೆಲವರು, ರೀಲ್ಸ್ ಮಾಡೋ ನೆಪದಲ್ಲಿ ಹುಚ್ಚು ಧೈರ್ಯ ತೋರುತ್ತಿದ್ದಾರೆ. ಯುವಕ, ಯುವತಿಯರು ಮಾತ್ರವಲ್ಲದೆ ದಂಪತಿಗಳು ಕೂಡ ಚಿಕ್ಕ ಮಕ್ಕಳೊಂದಿಗೆ ಫೋಟೋಗಳಿಗೆ ಫೋಸು ನೀಡುತ್ತಾ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.
ತಡೆಗೋಡೆಯ ಸ್ಥಳದಿಂದ ನಿಂತು ನೋಡಿದರೆ ಕಣ್ಣು ಹಾಯಿಸಿದಷ್ಟು ದೂರದವರೆಗೆ ಹಚ್ಚ ಹಸಿರ ಪರಿಸರ, ಭತ್ತದ ಗದ್ದೆ ಬಯಲುಗಳ ಸಹಿತ ಮಂಜು ಮುಸುಕಿದ ವಾತಾವರಣ ಸ್ವರ್ಗದಂತೆ ಗೋಚರಿಸುತ್ತದೆ. ಈ ದೃಶ್ಯ ನೋಡಲು ಎಷ್ಟು ಸುಂದರವಾಗಿದೆಯೋ ಅದಕ್ಕಿಂತ ದುಪ್ಪಟ್ಟು ಅಪಾಯವೂ ಇಲ್ಲಿದೆ.
ಈ ಪ್ರದೇಶ ಕಣಿವೆ ಮಾದರಿಯಲ್ಲಿದ್ದು, ಬಲವಾದ ಗಾಳಿಯೂ ಬೀಸುತ್ತದೆ. ತಡೆಗೋಡೆಯ ಮೇಲೆ ಯಾವುದೇ ರೀತಿಯ ಸುರಕ್ಷತಾ ಬೇಲಿಗಳಿಲ್ಲದ ಕಾರಣ ಸ್ವಲ್ಪ ಎಡವಿದರೂ ಬದುಕುಳಿಯುವ ಸಾಧ್ಯತೆಯೂ ಇಲ್ಲಿಲ್ಲ.
2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿಯುವ ಅಪಾಯದಲ್ಲಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಕೋಟ್ಯಾಂತರ ರೂ.ಗಳಲ್ಲಿ ಸದೃಢವಾದ ತಡೆಗೋಡೆ ನಿರ್ಮಿಸಿದೆ. ತಡೆಗೋಡೆ ಕಾಮಗಾರಿ ಪೂರ್ಣಗೊಂಡ ನಂತರÀ ಅತ್ತ ಕಡೆ ಯಾರೂ ತೆರಳದಂತೆ ಬಿದಿರಿನ ಬೇಲಿ ಹಾಕಲಾಗಿತ್ತು. ಗಾಳಿ, ಮಳೆಗೆ ಬೇಲಿ ಇನ್ನಿಲ್ಲವಾಗಿದ್ದು, ಪ್ರವಾಸಿಗರಿಗೆ ಈ ಪ್ರದೇಶ ಮುಕ್ತವಾಗಿದೆ. ಇಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದು, ಪ್ರವಾಸಿಗರ ವರ್ತನೆ ಮಿತಿ ಮೀರುತ್ತಿರುವುದಕ್ಕೆ ಸಾಕ್ಷಿ ಹೇಳುತ್ತಿವೆ.
::: ಪೊಲೀಸರಿಂದ ಕ್ರಮ :::
ಪ್ರವಾಸಿಗರು ಅಪಾಯದೊಂದಿಗೆ ಚೆಲ್ಲಾಟವಾಡುತ್ತಿದ್ದ ದೃಶ್ಯವನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದವರಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ. ಕೆಲವರು ಹೆದ್ದಾರಿ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಇತರ ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಕಾರಣ ಎಲ್ಲಾ ವಾಹನಗಳನ್ನು ಸ್ಥಳದಿಂದ ತೆರವು ಮಾಡಲಾಯಿತು. ಬಳಿಕ ಅಪಾಯಕಾರಿ ಪ್ರದೇಶಕ್ಕೆ ಯಾರೂ ಸುಳಿಯದಂತೆ ಎಚ್ಚರಿಕೆಯ ಟೇಪ್ ಅನ್ನು ಅಳವಡಿಸಲಾಯಿತು.