ವಿರಾಜಪೇಟೆ ಮೇ 27 NEWS DESK : ಬೇಸಿಗೆ ಶಿಬಿರಗಳ ಆಯೋಜನೆಯಿಂದ ಮಕ್ಕಳ ಮನಸ್ಸನ್ನು ಬದಲಾಯಿಸಬಹುದು ಎಂದು ವಿರಾಜಪೇಟೆ ರೋಟರಿ ಶಾಲೆಯ ಮುಖ್ಯೋಪಧ್ಯಾಯರಾದ ವಿಶಾಲಾಕ್ಷಿ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಅವಧಿಯ ಕಲಾರ್ಣವ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ನಂತರ ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಪರಿಪಾಠ ವಿವಿಧಡೆ ನಡೆಯುತ್ತಾ ಬಂದಿದೆ. ಹಾಕಿ, ಕ್ರಿಕೆಟ್ ಸೇರಿದಂತೆ ಕ್ರೀಡಾ ಹಾಗೂ ವೃತ್ತಿಪರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಮುಖ್ಯ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಮಕ್ಕಳಿಂದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಬಿರಗಳು ಅಗತ್ಯ. ಸ್ವತಂತ್ರವಾಗಿ ಬದುಕುವ ವ್ಯವಸ್ಥೆಯನ್ನು ಇಂತಹ ಶಿಬಿರದಲ್ಲಿ ಕಲಿಸಿಕೊಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೂ ಇದು ಅತ್ಯಂತ ಉಪಯುಕ್ತ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿ ರಜಿತ ಕಾರ್ಯಪ್ಪ, ಉತ್ತಮ ಆಶಯದೊಂದಿಗೆ ಮಕ್ಕಳ ಭವಿಷ್ಯ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿರುವ ನೃತ್ಯ ಸಂಸ್ಥೆಯ ಕಾರ್ಯ ಶ್ಲಾಘನೀಯ.
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳು ಮೊಬೈಲ್ ಮೊರೆ ಹೋಗುತ್ತಿದ್ದಾರೆ. ತಂಟೆ ಮಾಡುವ ಮಕ್ಕಳನ್ನು ಸುಮ್ಮನಾಗಿರಿಸಲು, ಅಳುವ ಮಗುವನ್ನು ಸಮಾಧಾನಗೊಳಿಸಲು ಪೋಷಕರೇ ಇಂದು ಮಕ್ಕಳ ಕೈಗೆ ಮೊಬೈಲ್‍ಅನ್ನು ಕೊಡುವ ವ್ಯವಸ್ಥೆಗೆ ತಲುಪಿದೆ. ಪರೀಕ್ಷೆಗಳು ಕಳೆದ ನಂತರ ಮಕ್ಕಳು ಸಮಯವನ್ನು ವ್ಯರ್ಥ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಹವ್ಯಾಸಗಳನ್ನು ವೃದ್ಧಿಸಿಕೊಳ್ಳಬಹುದು ಎಂದರಲ್ಲದೆ, ಪ್ರತಿಯೊಬ್ಬ ಮಕ್ಕಳಲ್ಲಿ ಸದಾ ಒಂದಿಲ್ಲೊಂದು ಪ್ರತಿಭೆಗಳು ಅಡಗಿರುತ್ತದೆ. ಅದನ್ನು ಹೊರತೆ ತರುವ ಕೆಲಸವನ್ನು ನಾವು ಮಾಡಬೇಕು ಎಂದರು.
ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಅದರೊಂದಿಗೆ ಮಕ್ಕಳು ಪ್ರಾತಃಕಾಲ ಬೇಗ ಏಳುವುದರೊಂದಿಗೆ ಯೋಗ, ಧ್ಯಾನ, ಪ್ರಾರ್ಥನೆಗಳನ್ನು ಮಾಡಿ ದಿನನಿತ್ಯದ ಕೆಲಸ ಪ್ರಾರಂಭಿಸಬೇಕು. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರೊಂದಿಗೆ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಂತಾಗಬೇಕು. ಹಾಗೆಯೇ ನಾಟ್ಯಾಂಜಲಿ ನೃತ್ಯ ಸಂಸ್ಥೆ ಈಗಾಗಲೇ ಹೆಸರು ಮಾಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಗಳಿಸುವಂತಾಗಲಿ ಎಂದು ಆಶಿಸಿದರು.
ಶಿಬಿರದ ಆಯೋಜಕರು, ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಸಂಸ್ಥಾಪಕಿ ವಿದುಷಿ ಹೇಮಾವತಿ ಕಾಂತರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದಲ್ಲಿ ಪಡೆದ ತರಬೇತಿ ಮಕ್ಕಳ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮಕ್ಕಳ ಬೇಸಿಗೆ ಶಿಬಿರ ಆಯೋಜನೆಯಲ್ಲಿ ಚಿಕ್ಕಮಕ್ಕಳಲ್ಲಿ ಮೂಲ ಪ್ರತಿಭೆಗಳನ್ನು ಹೊರ ಹಾಕಲು ಉತ್ತಮ ವೇದಿಕೆಗಳಾಗಿದ್ದು, ಇಲ್ಲಿ ಪಠ್ಯದ ಬದಲು ಮಕ್ಕಳ ಮನದಾಳದಲ್ಲಿ ಅಡಗಿರುವ ಆಸಕ್ತಿ ಮತ್ತು ಪ್ರತಿಭೆಯನ್ನು ವೃದ್ಧಿಸಿ ಅವರಲ್ಲೂ ಸಾಮಥ್ರ್ಯವನ್ನು ಹುಟ್ಟುಹಾಕಲು ಸಹಕಾರಿಯಾಗಿದೆ.
ಶಿಬಿರದಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜನೆ ಮಾಡುವ ಮೂಲಕ ಮಕ್ಕಳಲ್ಲಿ ಶಿಬಿರದ ಆಸಕ್ತಿಯನ್ನು ಹುಟ್ಟುಹಾಕಲಾಗಿದ್ದು, ಇಲ್ಲಿನ ಮಕ್ಕಳು ಅತ್ಯಂತ ಸೂಕ್ಷ್ಮವಾಗಿದ್ದಾರೆ. ಇಲ್ಲಿ ಎಲ್ಲವನ್ನು ಉತ್ತಮ ರೀತಿಯಲ್ಲಿ ಕಲಿತು, ಉಲ್ಲಾಸದಿಂದ ಪಾಲ್ಗೊಂಡು ಅನೇಕ ಚುಟುವಟಿಕೆಗಳ ಮೂಲಕ ಶಿಬಿರವನ್ನು ಯಶಸ್ವಿಯಾಗಿಸಿದ್ದಾರೆ ಎಂದರು.
ಶಿಬಿರಾರ್ಥಿಗಳ ಪೋಷಕರು ಮಾತನಾಡಿ ಶಿಬಿರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶಿಬಿರದಲ್ಲಿ ಭಾಗವಹಿಸಿದ್ದರಿಂದ ತಮ್ಮ ಮಕ್ಕಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿಸಿ ಸಂತಸ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿ ಶಿಬಿರ ಇನ್ನು ಇರಬೇಕು ಅನಿಸಿತ್ತು ಎನ್ನುವ ಮನೋಭಿಲಾಶೆ ವ್ಯಕ್ತಪಡಿಸಿದರು.
ಈ ಸಂದರ್ಭ ಶಿಬಿರಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಅರ್ಹತಾ ಪತ್ರ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೃತ್ಯ ತರಬೇತುದಾರರಾದ ಕಾವ್ಯಶ್ರೀ ಕಾಂತರಾಜ್, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಕೌಶಿ ಕಾವೇರಮ್ಮ, ದೃಶ್ಯ, ಧನ್ಯಶ್ರೀ, ಬಿಯಾಂಕಾ, ತಷ್ಮ ತಂಗಮ್ಮ, ಗಹನ, ಶ್ರೇಯ,ರೋಹನ್ ಸೇರಿದಂತೆ ಶಿಬಿರಾರ್ಥಿಗಳು, ಪೋಕಷರು ಉಪಸ್ಥಿತರಿದ್ದರು.
70 ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ವಿವಿಧ ತರಬೇತಿಯನ್ನು ಪಡೆದರು.