ಮಡಿಕೇರಿ ಮೇ 28 NEWS DESK : ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ತನ್ನನ್ನು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದ ವರಿಷ್ಠರು ನಿಲ್ಲಿಸಿದ್ದಾರೆ, ತನ್ನ ವಿರುದ್ಧ ಮಾತನಾಡಲು ಯಾವುದೇ ವಿಚಾರಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಅನಗತ್ಯ ಅಪಪ್ರಚಾರವನ್ನಷ್ಟೆ ಮಾಡಲಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ತಿಳಿಸಿದರು.
ಮಡಿಕೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ತನ್ನ ಹತ್ತನೇ ವಯಸ್ಸಿನಿಂದಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದವನು. ಚುನಾವಣಾ ಸ್ಪರ್ಧೆಗೆ ತನಗೆ ಅವಕಾಶ ನೀಡುವುದಕ್ಕೂ ಮುನ್ನ ತಾನು ಸಂಘದ ವಿಕಾಸ ಸೇವಾ ಟ್ರಸ್ಟ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅದಕ್ಕೆ ರಾಜೀನಾಮೆಯನ್ನಿತ್ತು ಇದೀಗ ಚುನಾವಣಾ ಸ್ಪರ್ಧೆಗೆ ಇಳಿದಿದ್ದೇನೆ ಎಂದರು.
ಬಿಜೆಪಿಯಿಂದ ಸ್ಪರ್ಧಿಸುವುದಕ್ಕೂ ಮುನ್ನ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಒತ್ತಡವಿತ್ತಾದರು, ಪಕ್ಷ ಮತ್ತು ಸಂಘ ಪರಿವಾರದ ಮುಖಂಡರು ತನ್ನ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಪ್ರಸ್ತುತ ರಾಜಕೀಯ ವಾತಾವರಣ ಬಿಜೆಪಿಗೆ ಪೂರಕವಾಗಿದ್ದು, ತನ್ನ ಗೆಲುವು ನಿಶ್ಚಿತವಾಗಿದೆ. ನನ್ನ ವಿರುದ್ಧ ಮಾತನಾಡಿರುವ ರಘುಪತಿ ಭಟ್ಟರಿಗೆ ಈ ಹಿಂದೆ ಮೂರು ಬಾರಿ ಎಂಎಲ್‍ಎ ಚುನಾವಣೆಗೆ ಅವಕಾಶ ನೀಡಿದ್ದು ಬಿಜೆಪಿ ಎನ್ನುವುದು ತಿಳಿದಿರಬಹುದೆಂದು ಅಸಮಾಧಾನ ವ್ಯಕ್ತಪಡಿಸಿದರು.
::: ನಿಷ್ಠಾವಂತ ಕಾರ್ಯಕರ್ತ :::
ನನ್ನ ಬಗ್ಗೆ ಮಾತನಾಡಲು ರಘುಪತಿ ಭಟ್ ಅವರಿಗೆ ಬೇರೆ ಏನೂ ವಿಚಾರ ಇಲ್ಲ. ಉಡುಪಿಯ ಮನೆಗೆ ಹೋದಾಗ ಕೂಡ ಸೌಜನ್ಯಕ್ಕೂ ಮನೆಯ ಒಳಗೆ ಕರೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ಬರುವ ಮೊದಲೇ ನಾನು ಸಂಘದಲ್ಲಿ ಇದ್ದವನು. ಕಾಂಗ್ರೆಸ್‍ನಿಂದ ಟಿಕೆಟ್ ನೀಡುತ್ತೇವೆ ಅಂತ ಬಹಳ ಒತ್ತಡ ಇತ್ತು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದಕ್ಕೂ ಮಣಿಯದೆ ಬಿಜೆಪಿಯಲ್ಲಿ ಇದ್ದೇನೆ. ನನ್ನ ಬಗ್ಗೆ ಹೇಳಲು ಬೇರೆ ಏನು ಇಲ್ಲ, ಹೀಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಘುಪತಿ ಭಟ್‍ಗೆ ಟಾಂಗ್ ನೀಡಿದರು.