ಮಡಿಕೇರಿ ಜೂ.4 NEWS DESK : ಪ್ರಧಾನಿ ನರೇಂದ್ರಮೋದಿ ಅವರ ಆಡಳಿತವನ್ನು ಮೆಚ್ಚಿ, ಒಳ್ಳೆಯ ಅಭ್ಯರ್ಥಿ ಎನ್ನುವ ಅಭಿಮಾನದಿಂದ ಯದುವೀರ್ ಒಡೆಯರ್ ಅವರನ್ನು ಕೊಡಗಿನ ಜನ ನಿರೀಕ್ಷೆಗೂ ಮೀರಿ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಂತೆಯೆ ಉತ್ತಮ ಮುನ್ನಡೆಯನ್ನು ಜಿಲ್ಲೆಯ ಜನತೆ ನೀಡಿದ್ದಾರೆ. ಜಿಲ್ಲೆಯ ಮತದಾರ ಕಾಂಗ್ರೆಸ್ ಪಕ್ಷದ ಎಲ್ಲಾ ಭಾಗ್ಯ ಮತ್ತು ಗ್ಯಾರಂಟಿಗಳನ್ನು ಬದಿಗಿಟ್ಟು ಮೋದಿ ನಾಯಕತ್ವಕ್ಕೆ ಬೆಂಬಲವನ್ನು ಮತದಾನದ ಮೂಲಕ ನೀಡಿದ್ದಾರೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.








