
ವಿರಾಜಪೇಟೆ ಜೂ.11 NEWS DESK : ವಿರಾಜಪೇಟೆಯ ಎ ಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಮೇಳ ನಡೆಯಿತು.
ಮೇಳವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಪುರಸಭೆ ಸದಸ್ಯ ಎಸ್.ಹೆಚ್.ಮತೀನ್, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಎಷ್ಟೋ ವಿದ್ಯಾವಂತ ನಿರುದ್ಯೋಗಿಗಳು ಬದುಕು ನಿರ್ಮಿಸಿಕೊಳ್ಳಲು ಉದ್ಯೋಗ ಮೇಳಗಳು ಸಹಕಾರಿ ಎಂದರು.
ನಮ್ಮ ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಮುಂದೆ ಯಾವ ಕೆಲಸವನ್ನು ಮಾಡಬಹುದು. ಅವರ ವಿದ್ಯಾಹರ್ತೆಗೆ ತಕ್ಕಂತೆ ಉದ್ಯೋಗ ಸಿಗಬೇಕು ಎಂದು ನಿರ್ಧರಿಸಲು ಈ ರೀತಿಯ ಉದ್ಯೋಗ ಮೇಳ ಸಹಕಾರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಉದ್ಯೋಗ ಮೇಳಗಳು ನಡೆದರೆ ಸ್ಥಳೀಯ ಉದ್ಯೋಗಕಾಂಕ್ಷಿಗಳಿಗೆ ಅವಕಾಶ ದೊರೆತಂತಾಗುತ್ತದೆ. ಉದ್ಯೋಗ ಮೇಳಗಳ ಲಾಭವನ್ನು ಎಲ್ಲಾರೂ ಸದುಪಯೋಗ ಪಡಿಸಿಕೊಳ್ಳುವಂತೆ ಮತೀನ್ ಹೇಳಿದರು.
ಪುರಸಭೆ ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಮಾತನಾಡಿ, ಸ್ಥಳೀಯ ಮಕ್ಕಳಿಗೆ ತಮ್ಮ ಕೌಶಲ್ಯ ಮತ್ತು ಅವರ ಸಾಮಥ್ರ್ಯಕ್ಕೆ ತಕ್ಕಂತೆ ಉದ್ಯೋಗ ವಿನಿಮಯ ಮಾಡಿಕೊಳ್ಳಲು ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದೆ. ಸಂಸ್ಥೆ ವತಿಯಿಂದ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳು ರೂಪುಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎ ಟೆಕ್ ಎಜುಕೇಶನಲ್ ಸಂಸ್ಥೆಯ ಪ್ರಮುಖರಾದ ಶಪೀರ್, ನಾನು ಕೂಡ ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಕಷ್ಟಪಟ್ಟು ಉತ್ತಮ ವಿದ್ಯಾಭ್ಯಾಸ ಮುಗಿಸಿದ ನಂತರ ವಕೀಲರಾಗಿ ಸೇವೆ ಸಲ್ಲಿಸಿ, ನ್ಯಾಯಾಧೀಶನಾಗಿ ಸುಮಾರು ಹತ್ತು ವರ್ಷಗಳ ಸೇವೆ ಸಲ್ಲಿಸಿದ್ದೇನೆ. ನಂತರ ಸ್ವಯಂ ನಿವೃತ್ತಿ ಹೊಂದಿ ವಿರಾಜಪೇಟೆ ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ವಿನೂತನ ವಿದ್ಯಾಭ್ಯಾಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡಬೇಕು, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬೇಕು ಎಂದರು.
ಕೆಲವರು ಮನೆಯಲ್ಲಿ ಕುಳಿತುಕೊಂಡು ಉತ್ತಮ ಉದ್ಯೋಗ ಮಾಡಿ ಉತ್ತಮ ಸಂಬಳ ಪಡೆಯಬಹುದು, ಆಧುನಿಕ ಯುಗದಲ್ಲಿ ಯಾವ ರೀತಿಯ ಕಾರ್ಯವನ್ನು ನಿರ್ವಹಿಸಬಹುದು ಎನ್ನುವುದರ ಕುರಿತು ಇಲ್ಲಿ ಕಲಿಸಿಕೊಡಲಾಗುತ್ತದೆ. ಅದೇ ರೀತಿಯಲ್ಲಿ ಪ್ರತಿಷ್ಠಿತ ಕಂಪೆನಿಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಮ್ಮ ಕೊಡಗಿನ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎನ್ನುವುದು ಸಂಸ್ಥೆಯ ಆಶಯ ಎಂದರಲ್ಲದೆ ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಖಮರುದ್ದಿನ್ ದಿಕ್ಸೂಚಿ ಭಾಷಣ ಮಾಡಿದರು.
ಸುಮಾರು ಹದಿನೈದು ಸಂಸ್ಥೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೊಡಗಿನ ಸುಮಾರು ನೂರ ಐವತ್ತು ಮಂದಿ ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.
ಆಶೀರ್ವಾದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ದಿಖ್ ಹಂಸ, ಸ್ಥಳೀಯ ಸಂಸ್ಥೆಯ ಮೇಲ್ವಿಚಾರಕರಾದ ಕುಮಾರಿ ಸೋನ ಅನನ್‍ಶವ, ಸಾಬೀರ ಸೇರಿದಂತೆ ಇತರರು ಇದ್ದರು.







