ಮಡಿಕೇರಿ ಜೂ.25 NEWS DESK : ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ 57 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಆದರೆ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದರಿಂದ ಕೇವಲ 500 ಕೋಟಿ ರೂ. ಆದಾಯ ಕ್ರೋಢೀಕರಣವಾಗುತ್ತದೆ. ಬಿಜೆಪಿ ವಿನಾಕಾರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮತ್ತು ಪ್ರತಿಭಟನೆ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ 22 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದಾಗ ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇರಲಿಲ್ಲವೇ, ಇವುಗಳ ಬೆಲೆಯನ್ನು ನೂರರ ಗಡಿ ದಾಟಿಸಿದವರು ಯಾರು ಎಂದು ಪ್ರಶ್ನಿಸಿದರು. ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಕೇಂದ್ರ ಸರ್ಕಾರ ಪೆಟ್ರೋಲ್ ದರ ಲೀಟರ್ ಗೆ 50 ರೂ. ಮತ್ತು ಡೀಸೆಲ್ ಗೆ 45 ರೂ. ಎಂದು ನಿಗಧಿ ಮಾಡಬಹುದಾಗಿದೆ. ಆದರೆ ಕೆಲವು ಹೊರ ದೇಶಗಳಿಗೆ ಭಾರತ ರೂ.32 ಕ್ಕೆ ಪೆಟ್ರೋಲ್ ಸರಬರಾಜು ಮಾಡುತ್ತಿದೆ. ವಿದೇಶಿಯರ ಮೇಲೆ ಇರುವ ಕರುಣೆ ದೇಶದ ಜನರ ಮೇಲೆ ಯಾಕಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ ಬೆಲೆ ಏರಿಕೆ ಮಾಡುತ್ತಿದೆ ಎಂದು ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. 2023 ರಲ್ಲೇ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ, ಕಾಂಗ್ರೆಸ್ ಪಕ್ಷ ಜನರಿಗಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದೆಯೇ ಹೊರತು ರಾಜಕೀಯಕ್ಕಾಗಿ ಅಲ್ಲ. 2028 ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದರು. ಸೋತ ನಂತರ ಒಂದು ವರ್ಷ ಬಿಲ ಸೇರಿಕೊಂಡಿದ್ದ ಕೊಡಗಿನ ಬಿಜೆಪಿ ಮಂದಿ ಈಗ ಹೊರ ಬರಲು ಆರಂಭಿಸಿದ್ದಾರೆ. ರಾಜ್ಯದ 224 ಶಾಸಕರಲ್ಲಿ ಮೊದಲ 10 ಸ್ಥಾನಗಳಲ್ಲಿ ಪೊನ್ನಣ್ಣ ಅವರು ಇದ್ದಾರೆ. ಬೇಕಿದ್ದರೆ ಬಿಜೆಪಿಯವರು ಕೇಂದ್ರದ ಮೂಲಕ ಸಮೀಕ್ಷೆ ಮಾಡಿಸಲಿ. ಅಭಿವೃದ್ಧಿ ಪರ ಚಿಂತನೆಯ ಜನಪ್ರಿಯ ಶಾಸಕರ ಪ್ರತಿಕೃತಿ ದಹಿಸುವ ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಗೌರವವಿಲ್ಲ ಎಂದು ಟೀಕಿಸಿದರು. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಇಲ್ಲಿಯವರೆಗೆ ಚರ್ಚೆ ಆರಂಭಿಸಿಲ್ಲ. ಕನಿಷ್ಠ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಕ್ಕೂ ಬರಲಿಲ್ಲ ಎಂದು ಲಕ್ಷ್ಮಣ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ವಕ್ತಾರ ತೆನ್ನಿರ ಮೈನಾ, ಡಿಸಿಸಿ ಸದಸ್ಯ ಪುಷ್ಪಾ ಪೂಣಚ್ಚ, ಪ್ರಮುಖರಾದ ಮಹೇಶ್ ಮೈಸೂರು ಹಾಗೂ ಬಿ.ಎಂ.ರಾಮು ಉಪಸ್ಥಿತರಿದ್ದರು.