ಮಡಿಕೇರಿ ಜೂ.25 NEWS DESK : ಕೊಡವ ಸಮಾಜಗಳು ಯಾವುದೇ ಕಾರಣಕ್ಕು ರಾಜಕೀಯದಲ್ಲಿ ಮೂಗು ತೂರಿಸಬಾರದು ಮತ್ತು ಸಾಮಾಜಿಕ ಜಾಲತಾಣಗಳ ಪ್ರಚೋದನೆಗೆ ಒಳಗಾಗಬಾರದು ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನು ಮುತ್ತಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಸಂದರ್ಭ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹನಕ್ಕೆ ಸಂಬಂಧಿಸಿದಂತೆ ಕೆಲವು ಕೊಡವ ಸಮಾಜಗಳು ಪ್ರತಿಕ್ರಿಯೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು. ಪೊನ್ನಣ್ಣ ಅವರ ಪರ ಪ್ರತಿಕ್ರಿಯೆ ನೀಡುವಂತೆ ಸಾಮಾಜಿಕ ಜಾಲತಾಣದ ವೀರರು ಕೊಡವ ಸಮಾಜಗಳಿಗೆ ಪ್ರಚೋದನೆ ನೀಡಿದ್ದಾರೆ. ಕೊಡವ ಸಮಾಜಗಳ ಒಕ್ಕೂಟ ಕೂಡ ಪ್ರತಿಕ್ರಿಯೆ ನೀಡಿದ್ದು, ಇದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ಸಿಗರಿಗೆ ಚುನಾವಣೆ ಬಂದಾಗ ಮಾತ್ರ ಕೊಡವರ ಬಗ್ಗೆ ಕಾಳಜಿ ಹೆಚ್ಚಾಗುತ್ತದೆ. ಪೊನ್ನಣ್ಣ ಅವರು ಮಾತ್ರ ಕೊಡವ ಜನಪ್ರತಿನಿಧಿಯೇ ಬೇರೆ ಯಾರು ಇಲ್ಲವೇ, ಈ ಹಿಂದೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರತಿಕೃತಿ ದಹಿಸಿದಾಗ ಯಾಕೆ ಯಾರೂ ಧ್ವನಿ ಎತ್ತಲಿಲ್ಲ, ಅಪ್ಪಚ್ಚು ರಂಜನ್ ಕೊಡವರಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಹಾಗೂ ಶಾಸಕರುಗಳು ಕೊಡವ ಸಮಾಜಗಳ ಒಕ್ಕೂಟ ಮತ್ತು ಕೊಡವ ಸಮಾಜಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬೆಂಗಳೂರು ಕೊಡವ ಸಮಾಜಕ್ಕೆ 7 ಏಕರೆ ಜಾಗ ಬಿಜೆಪಿ ಸರ್ಕಾರವಿದ್ದಾಗ ದೊರೆತ್ತಿದೆ. ಕಾಂಗ್ರೆಸ್ ಪಕ್ಷ ಮತ್ತು ಈಗಿನ ಶಾಸಕರು ಕೊಡವರಿಗೆ ನೀಡಿದ ಕೊಡುಗೆಯಾದರು ಏನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ ಪ್ರತಿಭಟನೆಗಳು ನಡೆದಾಗ ಪ್ರತಿಕೃತಿ ದಹನ ಮಾಡುವುದು ಸಹಜ. ಅದನ್ನೇ ದೊಡ್ಡದು ಮಾಡಿ ಜಾತಿ ರಾಜಕೀಯ ಮಾಡುವುದು, ಕೆಲವು ಕೊಡವ ಸಮಾಜಗಳು ಹೇಳಿಕೆ ನೀಡಿರುವುದು ಸರಿಯಲ್ಲವೆಂದರು. ಕೊಡವ ಸಮಾಜಗಳ ಒಕ್ಕೂಟಕ್ಕೆ ಯಡಿಯೂರಪ್ಪ ಅವರ ಕಾಲದಲ್ಲಿ 2 ಕೋಟಿ ರೂ. ನೀಡಲಾಗಿದೆ. ಎಸ್.ಆರ್.ಬೊಮ್ಮಾಯಿ ಅವರು 10 ಕೋಟಿ ರೂ.ಗಳನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರಗಳ ಸಂದರ್ಭದಲ್ಲೇ ಕೊಡವರಿಗೆ ಹೆಚ್ಚು ನೆರವು ದೊರೆತ್ತಿದೆ ಎಂದು ತಿಳಿಸಿದರು. ಮಡಿಕೇರಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್ ಮಾತನಾಡಿ ಶಾಸಕ ಪೊನ್ನಣ್ಣ ಅವರ ಪ್ರತಿಕೃತಿ ಮಾತ್ರ ದಹಿಸಬಾರದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಬಹುದು ಎಂದರೆ ಯಾವ ನ್ಯಾಯ, ಆಯಾ ಸಮುದಾಯದವರಿಗೆ ನೋವಾಗುವುದಿಲ್ಲವೇ, ಕಾಂಗ್ರೆಸ್ಸಿಗರ ವರ್ತನೆ ಸರಿ ಇದೆಯೇ ಎಂದು ಪ್ರಶ್ನಿಸಿದರು. ಅಭಿವೃದ್ಧಿಪರ ಚಿಂತಸದೆ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಖಂಡನೀಯವೆಂದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ರವಿ ಬಸಪ್ಪ ಉಪಸ್ಥಿತರಿದ್ದರು.