ಸೋಮವಾರಪೇಟೆ ಜೂ.26 NEWS DESK : ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ವಿರುದ್ಧ ವಿನಾಕಾರಣ ಹೂಡಲಾಗಿರುವ ಮೊಕದ್ದಮೆಯನ್ನು ವಾಪಾಸ್ ಪಡೆಯದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸೋಮವಾರಪೇಟೆ ಮಂಡಲ ಬಿಜೆಪಿ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತೆರಿಗೆ ಹೆಚ್ಚಳದಿಂದ ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ತಕ್ಷಣ ಪೆಟ್ರೋಲ್, ಡೀಸೆಲ್ ಮತ್ತು ಹಾಲಿನ ಬೆಲೆ ಇಳಿಕೆ ಮಾಡಬೇಕು ಎಂದು ಮಂಡಲದ ವಕ್ತಾರ ಕಂಠಿ ಕಾರ್ಯಪ್ಪ ಆಗ್ರಹಿಸಿದ್ದಾರೆ.
ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಜನರ ಮೇಲೆ ತೆರಿಗೆ ಬರೆ ಹಾಕಲಾಗುತ್ತಿದೆ. ಬಿಟ್ಟಿ ಭಾಗ್ಯಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ, ಇದೇ ಕಾರಣಕ್ಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಮತ್ತು ತೆರಿಗೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆಯನ್ನು ವಿರೋಧಿಸಿ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಮತ್ತು ಪ್ರತಿಕೃತಿ ದಹನವನ್ನು ಶಾಸಕರು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು. ಈ ವಿಷಯದಲ್ಲಿ ಜಾತಿಯನ್ನು ತಂದು ಕೆಲವರು ಪ್ರಚೋದನೆ ಮಾಡುತ್ತಿರುವುದು ಖಂಡನೀಯ. ಪ್ರತಿಭಟನೆ ಸಂವಿಧಾನಾತ್ಮಕ ಹಕ್ಕು ಎಂದು ಹೇಳಿದರು.
ಮಂಡಲದ ಅಧ್ಯಕ್ಷ ಎಂ.ಎಲ್.ಗೌತಮ್ ಮಾತನಾಡಿ, ವಿರಾಜಪೇಟೆ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆದರೂ 29 ಕಾರ್ಯಕರ್ತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಈ ಮೊಕದ್ದಮೆಗಳನ್ನು ತಕ್ಷಣ ವಾಪಾಸ್ಸು ಪಡೆಯದಿದ್ದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಕೇಸ್ ಗಳನ್ನು ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷಿತ್ ರಾಜು, ದರ್ಶನ್ ಜೋಯಪ್ಪ ಹಾಗೂ ಎಸ್.ಆರ್.ಸೋಮೇಶ್ ಇದ್ದರು.