ಮಡಿಕೇರಿ ಜು.1 NEWS DESK : ಮಹಾಮೈತ್ರಿ ಬುದ್ಧ ವಿಹಾರ ಸ್ಥಾಪಿಸಲು ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳು ಹಾಗೂ ಗೌತಮ ಬುದ್ಧನ ಅನುಯಾಯಿಗಳು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹೋಬಳಿಯ ಮಾದ್ರೆ ದಂಡಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಿದ್ದಾರೆ.
ಸಂಘಟನೆಗಳ ಪ್ರಮುಖರು ಹಾಗೂ ಸದಸ್ಯರು ಉದ್ದೇಶಿತ ಜಾಗದಲ್ಲಿ ಶ್ರಮದಾನ ನಡೆಸಿ ಸ್ವಚ್ಛತಾ ಕಾರ್ಯ ಕೈಗೊಂಡರು. ನಂತರ “ಮಹಾಮೈತ್ರಿ ಬುದ್ಧ ವಿಹಾರ” ಫಲಕವನ್ನು ಅಳವಡಿಸಿದರು.
ಈ ಸಂದರ್ಭ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಬಹುನಿರೀಕ್ಷಿತ ಯೋಜನೆ ಹಲವು ವರ್ಷಗಳ ನಂತರ ಕೈಗೂಡುತ್ತಿದ್ದು, ಬುದ್ಧನ ಅನುಯಾಯಿಗಳಿಗೆ ಹರ್ಷ ತಂದಿದೆ. ಜಿಲ್ಲಾಧಿಕಾರಿಗಳು ಜಾಗವನ್ನು ಬುದ್ಧ ವಿಹಾರಕ್ಕೆ ಹಸ್ತಾಂತರಿಸಿದ ನಂತರ ಸುವ್ಯವಸ್ಥಿತ ವಿಹಾರಧಾಮ ನಿರ್ಮಾಣ ಮಾಡಲಾಗುವುದು ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ದಲಿತ ಸಂಘಟನೆಗಳ ಚಾಲನಾ ಸಮಿತಿಯ ಸಂಚಾಲಕ ಜೆ.ಆರ್.ಪಾಲಾಕ್ಷ ಮಾತನಾಡಿ ಈಗ ಗುರುತಿಸಿರುವ ಜಾಗದಲ್ಲಿ ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳು ಹಾಗೂ ಗೌತಮ ಬುದ್ಧನ ಅನುಯಾಯಿಗಳು ವಿಚಾರ ಸಂಕಿರಣ ನಡೆಸÀಲು ನಿರ್ಧರಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ, ಪ್ರಮುಖರಾದ ಚಿನ್ನಪ್ಪ ಎಡೆಹಳ್ಳಿ, ನವೀನ್ ಕೊಡ್ಲಿಪೇಟೆ, ಮಂಜು, ರವಿ, ಮುತ್ತಣ್ಣ, ನಿಂಗರಾಜು ಚೀಕನಹಳ್ಳಿ ಮತ್ತಿತರರು ಹಾಜರಿದ್ದರು.