ವಿರಾಜಪೇಟೆ ನ.28 NEWS DESK : ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡುವಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿತ ವಾರ್ಷಿಕ ‘ಕೊಡವ ನಮ್ಮೆ’ಗೆ ಗುರುವಾದ ವಿದ್ಯುಕ್ತ ಚಾಲನೆ ನೀಡಲಾಯಿತು. ಮುಂದಿನ ಮೂರು ದಿನಗಳ ಕಾಲ ಬಾಳೂಗೋಡುವಿನಲ್ಲಿ ಕೊಡವ ನಮ್ಮೆ ಪ್ರಯುಕ್ತ ಕೊಡವ ಸಮಾಜಗಳ ನಡುವಣ ಹಾಕಿ ಪಂದ್ಯಾವಳಿ, ಹಗ್ಗಜಗ್ಗಾಟ ಸ್ಪರ್ಧೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಕೊಡವ ಆಟ್ ಪಾಟ್ ಪೈಪೋಟಿಗಳು ನಡೆಯಲಿವೆ. ‘ಕೊಡವ ನಮ್ಮೆ’ಯ ಪ್ರಯುಕ್ತ ಆಯೋಜಿತ ಹಾಕಿ ಪಂದ್ಯಾವಳಿಗೆ, ಚಾಮುಂಡಿ ದೇವಸ್ಥಾನ ಮತ್ತು ಮೈದಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಸ್ಟಿಕ್‍ನಿಂದ ಚೆಂಡನ್ನು ತಳ್ಳುವ ಮೂಲಕ ಶಾಸಕರು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಕೊಡವ ಸಮುದಾಯ ಸಂಘಟನೆಯ ಮೂಲಕ ಒಗ್ಗಟ್ಟನ್ನು ಕಂಡುಕೊಳ್ಳುವ ಮೂಲಕ ಮುನ್ನಡೆಯಬೇಕು, ಇಂತಹ ಕ್ರೀಡಾ ಚಟುವಟಿಕೆಗಳು ಸಮುದಾಯ ಬಾಂಧವರೆಲ್ಲರು ಒಂದಾಗಿ ಬೆರೆಯಲು ಸಹಕಾರಿಯಾಗಿದೆ. ಕೊಡವ ಸಮಾಜಗಳ ಒಕ್ಕೂಟವು ಸಮುದಾಯ ಬಾಂಧವರೆಲ್ಲರನ್ನು ಒಟ್ಟಾಗಿಸುವ ಮೂಲಕ ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸುವಂತಾಗಲೆಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಡವ ಸಮಾಜಗಳ ಒಕ್ಕೂಟದ ಸದಸ್ಯರು, ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು, ಆಟಗಾರರು ಉಪಸ್ಥಿತರಿದ್ದರು.