ಮಡಿಕೇರಿ ನ.28 NEWS DESK : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಆರ್.ಸಿ.ಹೆಚ್ ವಿಭಾಗ ಮಡಿಕೇರಿ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಸಂಯುಕ್ತ ಆಶ್ರಯದಲ್ಲಿ “ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಜಿಲ್ಲಾ ಮಟ್ಟದ ಸಾಮಾಜಿಕ ಜಾಗೃತಿ ಮತ್ತು ಕ್ರಿಯಾ ಅಭಿಯಾನವು ನಗರದ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ನಡೆಯಿತು. ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಮಧುಸೂಧನ್ ಅವರು ಎಸ್‍ಎಎಎನ್‍ಎಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ನವೆಂಬರ್, 12 ರಿಂದ 2025 ರ ಫೆಬ್ರವರಿ, 28 ರವರೆಗೆ ವಿಶ್ವದಾದ್ಯಂತ ವಿಶ್ವ ನ್ಯೂಮೋನಿಯಾ ದಿನವನ್ನು (SAANS)ಆಚರಿಸಲಾಗುತ್ತಿದೆ. ಎಸ್‍ಎಎಎನ್‍ಎಸ್ 3 ತಿಂಗಳ ಅರಿವು ಕಾರ್ಯಕ್ರಮವಾಗಿದೆ. ನ್ಯುಮೋನಿಯಾ ಎಂಬುದು ಬ್ಯಾಕ್ಟೀರಿಯಾ, ವೈರಸ್‍ಗಳು ಅಥವಾ ಶಿಲೀಂದ್ರಗಳಿಂದ ಉಂಟಾಗುವ ಶ್ವಾಸಕೋಶದ ಸೋಂಕು. ಈ ಸೋಂಕಿಗೆ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯು ಶ್ವಾಸಕೋಶದ ಗಾಳಿಯ ಚೀಲಗಳು ಕೀವು ಮತ್ತು ದ್ರವಗಳಿಂದ ತುಂಬಲು ಕಾರಣವಾಗುತ್ತದೆ. ಎಸ್‍ಎಎಎನ್‍ಎಸ್‍ವು ಉಸಿರಾಟ. ದೇಹಕ್ಕೆ ಉಸಿರಾಟ ಎಷ್ಟು ಮುಖ್ಯ ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ನ್ಯುಮೋನಿಯಾವು ಉಸಿರಾಟದಿಂದ, ರೋಗನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಮತ್ತು ಸ್ವಚ್ಛತೆ ಸರಿಯಿಲ್ಲದಿದ್ದರೆ ಹರಡುತ್ತದೆ. ಮಕ್ಕಳ ಮರಣಕ್ಕೆ ಮುಖ್ಯ ಕಾರಣ ನ್ಯೂಮೋನಿಯ. ಇದನ್ನು ತಡೆಯಲು ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂಧಿ ವರ್ಗದವರು ಮನೆ ಭೇಟಿ ಸಂದರ್ಭದಲ್ಲಿ ನ್ಯೂಮೋನಿಯಾಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಮಾಡಿ ಕಾಯಿಲೆಯ ಲಕ್ಷಣಗಳಿದ್ದ ಪಕ್ಷದಲ್ಲಿ ಅಮೋಕ್ಸಿಸಿಲಿನ್ ಮಾತ್ರೆಗಳನ್ನು ನೀಡಿ ಆಸ್ಪತ್ರೆಗೆ ಕಳುಹಿಸಬೇಕು. ಆರೋಗ್ಯ ಇಲಾಖೆಯಲ್ಲಿ ನ್ಯುಮೋನಿಯಾ ತಡೆಗಟ್ಟಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಪೆಂಟಾವಲೆಂಟ್ ಮತ್ತು ಪಿ.ಸಿ.ವಿ ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ. ‘ನ್ಯುಮೋನಿಯಾ ತಟಸ್ಥಗೊಳಿಸಲು ವೈದ್ಯರಿಗೆ, ಸಿಬ್ಬಂಧಿಗಳಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ನ್ಯುಮೋನಿಯ ತಡೆಗಟ್ಟುವಲ್ಲಿ ರಕ್ಷಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮಗುವಿಗೆ ನ್ಯುಮೋನಿಯಾ ಬಾರದ ಹಾಗೆ 6 ತಿಂಗಳವರೆಗೆ ವಿಶೇಷ ಸ್ತನ್ಯಪಾನ ಮಾಡಿಸುವುದು. ಎದೆ ಹಾಲು ಬಿಟ್ಟು ನೀರು ಕೂಡ ಮಗುವಿಗೆ ಕೊಡಬಾರದು. 6 ತಿಂಗಳ ನಂತರ ಪೂರಕ ಆಹಾರ ನೀಡಬೇಕು ಎಂದರು.’ ಮಗುವಿಗೆ ವಯಸ್ಸಿಗನುಣವಾಗಿ ಚುಚ್ಚುಮದ್ದು ನೀಡುವುದರಿಂದ ಬರಬಹುದಾದ ರೋಗ ತಡೆಗಟ್ಟಬಹುದಾಗಿದೆ ಮತ್ತು ಮನೆ ಒಳಗಿನ ಹಾಗೂ ಹೊರಗಿನ ಮಾಲಿನ್ಯಗಳಿಂದ ಮಕ್ಕಳನ್ನು ರಕ್ಷಿಸಬೇಕು. ಧೂಮಪಾನ ಮಾಡುವಾಗ ಅದರ ಹೊಗೆಯಿಂದ ಮಕ್ಕಳನ್ನು ರಕ್ಷಿಸಬೇಕು ಎಂದು ತಿಳಿಸಿದರು. ನಾಟಿ ಔಷಧಿ ಕೊಡಬಾರದು. ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ವೈದ್ಯರ ಸಲಹೆಯನ್ನು ತತ್‍ಕ್ಷಣವೇ ಪಡೆಯುವುದು ಸೂಕ್ತ ಎಂದು ತಿಳಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ್ ಮಾತನಾಡಿ, ವಯಸ್ಸಿಗನುಗುಣವಾಗಿ ಮಕ್ಕಳಿಗೆ ನೀಡುವ ಸಾರ್ವತ್ರಿಕ ಲಸಿಕೆ ಕೊಡಿಸಬೇಕು. ಮನೆಯಲ್ಲೇ ಮಗುವಿಗೆ ನ್ಯುಮೋನಿಯಾ ಬಾರದ ಹಾಗೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದರು. ಆ್ಯಂಟಿಬಯೋಟಿಕ್ಸ್‍ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡದಂತೆ, ರೋಗ ಬಾರದಂತೆ ಮುಂಜಾಗೃತೆ ವಹಿಸುವುದು ಅತೀ ಮುಖ್ಯವೆಂದು ಕಿವಿಮಾತು ಹೇಳಿದರು. ಸಮುದಾಯದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಕೊಡುವ ಮಾಹಿತಿಗಳು ಮತ್ತು ಸಲಹೆ ಸೂಚನೆಗಳ ಮೇರೆಗೆ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಗರ್ಭಿಣಿಯರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ನ್ಯುಮೋನಿಯಾದ ಪ್ರಮುಖ ಲಕ್ಷಣಗಳು ಜ್ವರ, ಕೆಮ್ಮು, ದೇಹ ನೀಲಿ ಆಗುವುದು, ಉಸಿರಾಟದ ತೊಂದರೆ, ಎದೆನೋವು ಮತ್ತು ನಿಶ್ಯಕ್ತಿಗಳು ಆಗಿದೆ ಎಂದು ಮಾಹಿತಿ ನೀಡಿದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ ಮಾತನಾಡಿ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ನ್ಯುಮೋನಿಯಾ ರೋಗಲಕ್ಷಣಗಳು ಗುರುತಿಸುವಿಕೆ ಚಿಕಿತ್ಸೆಯು ಸಮರ್ಪಕವಾಗಿ ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನ್ಯುಮೋನಿಯಾವನ್ನು ತಡೆಗಟ್ಟುವುದು ಮತ್ತು ಶಿಶುಮರಣವನ್ನು ಕಡಿಮೆ ಮಾಡಲು ಮತ್ತು ಜಾಗ್ರತೆ ವಹಿಸುವುದು ಈ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದು ತಿಳಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ದಿವ್ಯರಾಣಿ ಅವರು ಪಿಪಿಟಿ ಮೂಲಕ ನ್ಯುಮೋನಿಯಾ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದರು. ನ್ಯುಮೋನಿಯಾಕ್ಕೆ ಮುಖ್ಯ ಕಾರಣಗಳು ಬ್ಯಾಕ್ಟೀರಿಯಾ, ವೈರಸ್‍ಗಳು, ಫಂಗಸ್, ವಾಯುಮಾಲಿನ್ಯ, ಅಸ್ಪಿರೇಷನ್ ನ್ಯುಮೋನಿಯಾ. ಅಪೌಷ್ಠಿಕತೆ, ಕಡಿಮೆ ತೂಕ, ಲಸಿಕೆ ಹಾಕಿಸದೇ ಇರುವುದು, ಧೂಮಪಾನ, ಜನದಟ್ಟಣೆ, ವಿಟಮಿನ್ ಅಂಶ ಕಡಿಮೆ ಇರುವುದು ಹಾಗೂ ಇತರೆ ಕಾಯಿಲೆಗಳು ನ್ಯುಮೋನಿಯಾದ ಅಪಾಯಕಾರಿ ಅಂಶಗಳು ಎಂದು ತಿಳಿಸಿದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂಧನ್, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ್, ಶುಶ್ರೂಷಕ ಅಧೀಕ್ಷಕರಾದ ವೀಣಾ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕರಿ ಗಾಯತ್ರಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದೇವರಾಜು, ಇತರರು ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಹೆಚ್.ಕೆ. ಅವರು ನಿರೂಪಿಸಿ, ಸ್ವಾಗತಿಸಿದರು.