ಮಡಿಕೇರಿ ನ.28 NEWS DESK : ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ವಿತರಿಸಲಾಗುವ ಕೃಷಿ ಉಪಕರಣಗಳಾದ ಪವರ್ ಟಿಲ್ಲರ್, 5 ಎಚ್.ಪಿ ಡೀಸೆಲ್ ಎಂಜಿನ್, ಕಳೆಕೊಚ್ಚುವ ಯಂತ್ರ, ಎಚ್‍ಟಿಪಿ ಸಿಂಪರಣಾ ಯಂತ್ರ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹೆಚ್.ಡಿ.ಪಿ.ಇ ಪೈಪ್‍ಗಳನ್ನು ರೈತ ಫಲಾನುಭವಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ವಿರಾಜಪೇಟೆಯಲ್ಲಿ ಗುರುವಾರ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣ ಪಡೆಯಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೃಷಿಗೆ ಅಗತ್ಯವಾಗಿರುವ ಉಪಕರಣಗಳನ್ನು ಸಹಾಯಧನದಲ್ಲಿ ಪಡೆದುಕೊಳ್ಳುವಂತೆ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಳಸುವುದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ಕೂಲಿ ಕಾರ್ಮಿಕರ ಅಭಾವವನ್ನು ನೀಗಿಸುವಲ್ಲಿ ಸಹಕಾರವಾಗುವುದು ಎಂದು ತಿಳಿಸಿದರು. ವಿತರಿಸಲಾದ ಕೃಷಿ ಉಪಕರಣಗಳ ವಿವರ ಇಂತಿದೆ: ಪವರ್ ಟಿಲ್ಲರ್ 4, 5 ಹೆಚ್.ಪಿ ಡೀಸೆಲ್ ಎಂಜಿನ್ 10, ಕಳೆಕೊಚ್ಚುವ ಯಂತ್ರ 3, ಎಚ್.ಟಿ.ಪಿ ಸಿಂಪರಣಾ ಯಂತ್ರ 2, ಎಚ್.ಡಿ.ಪಿ.ಇ ಪೈಪ್ 15. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಬಿ.ಎಸ್.ಚಂದ್ರಶೇಖರ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಡಿ.ಎಸ್.ಸೋಮಶೇಖರ್, ವಿರಾಜಪೇಟೆ ಸಹಾಯಕ ಕೃಷಿ ನಿರ್ದೇಶಕರಾದ ಗೌರಿ ಆರ್, ವಿರಾಜಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಲವಿನ್ ಮಾದಪ್ಪ ಪಿ., ಬಾಳೆಲೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೀರಾ ಎ.ಪಿ, ಅಶ್ವಿನ್‍ಕುಮಾರ್ ಎಚ್.ಬಿ ಮತ್ತು ಕೃಷಿ ಇಲಾಖೆ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.