ಮಡಿಕೇರಿ ಜು.4 NEWS DESK : ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜು.6 ರಂದು ಚೆಟ್ಟಳ್ಳಿಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಬೆಳಿಗ್ಗೆ 10.30 ಗಂಟೆಗೆ ಚೆಟ್ಟಳ್ಳಿ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಆದಿಮ ಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ನ್ನು ಸಂರಕ್ಷಿಸಿಕೊಳ್ಳಲು ಜಿಲ್ಲೆಯಾದ್ಯಂತ ಸಿಎನ್‌ಸಿ ವತಿಯಿಂದ ನಿರಂತರ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ರಾಜಕೀಯ ನಂಟು ಮತ್ತು ಕಪ್ಪು ಹಣ ಹೊಂದಿರುವ ಭೂಮಾಫಿಯಾಗಳು, ರೆಸಾರ್ಟ್ ದೊರೆಗಳು, ಕಾರ್ಪೋರೇಟ್ ವಲಯಗಳು, ಬಹುರಾಷ್ಟ್ರೀಯ ಕಂಪೆನಿಗಳು, ಅನಿವಾಸಿ ಭಾರತೀಯ ಉದ್ಯಮಪತಿಗಳು, ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು ಹಾಗೂ ಕಾಳಸಂತೆಕೋರರು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟವನ್ನು ತೋರಿಸಿ ಕಪ್ಪು ಹಣದ ಚಲಾವಣೆಗೆ ಸಂಚು ರೂಪಿಸಲಾಗುತ್ತಿದೆ. ಭೂಮಾಫಿಯಾಗಳಿಂದ ಕೊಡವ ಲ್ಯಾಂಡ್ ನ ಕಾವೇರಿ ಒಡಲು ನಾಶವಾಗುತ್ತಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.











