ಕುಶಾಲನಗರ, ಜು.4 NEWS DESK : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಪ್ರೌಢಶಾಲೆಯಲ್ಲಿ ಶಾಲೆಯ ರಾಮಾನುಜನ್ ಗಣಿತ ಸಂಘದ ಆಶ್ರಯದಲ್ಲಿ ಕುಶಾಲನಗರ ಬ್ರೈನ್ ಅಕಾಡೆಮಿ ವತಿಯಿಂದ ಮಕ್ಕಳಿಗೆ ಆರಂಭಿಸಲಾದ ಅಬಾಕಸ್ ಕಲಿಕಾ ತರಬೇತಿಗೆ ಕುಶಾಲನಗರ
ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಚಾಲನೆ ನೀಡಿದರು.
ಅಬಾಕಸ್ ತರಬೇತಿ ಪಡೆಯಲಿರುವ ಶಾಲೆಯ 100 ಮಕ್ಕಳಿಗೆ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಸಾಧನಾ ಸಲಕರಣೆ ಮತ್ತು ಅಭ್ಯಾಸ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಅಬಾಕಸ್ ಕಲಿಕೆಯ ಸಾಧನ ಸಲಕರಣೆ ವಿತರಿಸಿ ಮಾತನಾಡಿದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ
ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಬುದ್ಧಿಮತ್ತೆಯ ಅಬಾಕಸ್ ಕಲಿಕೆಯು ಮಕ್ಕಳಲ್ಲಿ ಏಕಾಗ್ರತೆ, ಕ್ರಿಯಾಶೀಲತೆಯೊಂದಿಗೆ ಸೃಜನಶೀಲತೆ ಬೆಳೆಸುವ ಮೂಲಕ ಅವರ ಬುದ್ಧಿಶಕ್ತಿಯನ್ನು ಉದ್ದೀಪನಗೊಳಿಸಲು ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಅಬಾಕಸ್ ಕಲಿಕೆಯ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನಾಭಿವೃದ್ಧಿ ವೃದ್ಧಿಸಿಕೊಳ್ಳಬೇಕು ಎಂದರು.
ತಮ್ಮ ಸಹಕಾರ ಸಂಘದ ವತಿಯಿಂದ ಹಸಿರು ಯೋಜನೆಯಡಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಲಿನ ಶಾಲಾ- ಕಾಲೇಜುಗಳಲ್ಲಿ 700 ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ಕೂಡ ಈ ಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯವನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಶರವಣಕುಮಾರ್ ತಿಳಿಸಿದರು.
ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳ ಪ್ರಗತಿಯೊಂದಿಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರ ಪರಿಶ್ರಮದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿರುವುದಕ್ಕೆ ಸಹಕಾರ ಸಂಘದ ವತಿಯಿಂದ ಅಭಿನಂದಿಸಲಾಗುವುದು. ಬರುವ ಶೈಕ್ಷಣಿಕ ವರ್ಷದಲ್ಲೂ ಕೂಡ ಈ ಶಾಲೆಗೆ ಶೇ.100 ಫಲಿತಾಂಶ ಗಳಿಸಲು ಪರಿಶ್ರಮ ಹಾಕಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಗ್ರಾಮಾಂತರ ಶಾಲೆಯ ಮಕ್ಕಳಿಗೆ ಅಬಾಕಸ್ ಕಲಿಕಾ ತರಬೇತಿಗೆ
ಪೂರಕವಾಗಿ ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ವತಿಯಿಂದ ಮಕ್ಕಳಿಗೆ ಸಾಧನಾ ಸಲಕರಣೆಗಳನ್ನು ನೀಡುವ ಮೂಲಕ ನಮ್ಮ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಹಕಾರ ಸಂಘದ ವತಿಯಿಂದ ತಮ್ಮ ಶಾಲೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯವಾದುದು ಎಂದರು.
ಅಬಾಕಸ್ ಕಲಿಕಾ ತರಬೇತಿಯ ಮಹತ್ವ ಕುರಿತು ಮಾತನಾಡಿದ ಕುಶಾಲನಗರ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿಯ ಮುಖ್ಯಸ್ಥ ಕುಸುಮ ಆರ್.ರಾಜ್, ಇದು ಮಿದುಳಿನ ಅಭಿವೃದ್ಧಿ, ತಾರ್ಕಿಕ ಚಿಂತನೆ ಮತ್ತು ಸಂಖ್ಯಾತ್ಮಕ ಸಂಸ್ಕರಣಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಇದರ ಜತೆಗೆ
ಅವರಲ್ಲಿ ವಿವಿಧ ಕಲಿಕೆಯ ಅರಿವಿನ ಸಾಮರ್ಥ್ಯಗಳನ್ನು ಉತ್ತೇಜಿಸುತ್ತದೆ ಎಂದರು.
ಈ ಶಾಲೆಯಲ್ಲಿ ಮಕ್ಕಳ ಅಬಾಕಸ್ ಕಲಿಕಾ ತರಬೇತಿಗೆ ಕೈಗಾರಿಕೋದ್ಯಮಿಗಳ ಸಂಘವು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಎಂ.ಜವರಯ್ಯ ಮಾತನಾಡಿ, ವಿದ್ಯಾರ್ಥಿಗಳು ಅಬಾಕಸ್ ತರಬೇತಿಯ ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಸಂಘದ ನಿರ್ದೇಶಕರಾದ ಎಂ.ವಿ.ನಾರಾಯಣ, ಕವಿತ ಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಅಬಾಕಸ್ ಕಲಿಕಾ ತರಬೇತಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಘದ ನಿರ್ದೇಶಕರಾದ ಎಂ.ಎಂ.ಶಾಹಿರ್, ವಿ.ಸಿ.ಅಮೃತ್, ಕೆ.ಪಿ.ಶರತ್, ಕೆ.ಎನ್.ಸುರೇಶ್, ಕೃತಿಕ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಡಿ. ಶ್ರೀಜಿತ್, ವ್ಯವಸ್ಥಾಪಕ ಆರ್. ರಾಜು,ಸಿಬ್ಬಂದಿ ಎಂ.ಜಿ.ಬೊಳ್ಳಮ್ಮ, ದಾನಿ ಸೈಜನ್ ಪೀಟರ್, ಇತರರು ಇದ್ದರು.
ಅಬಾಕಸ್ ಕಲಿಕಾ ಅಭ್ಯಾಸದ ಸಂಪನ್ಮೂಲ ಶಿಕ್ಷಕಿ ಕಲ್ಪನ, ಕೆ.ಟಿ.ಲಾವಣ್ಯ ಇದ್ದರು.
ಅಬಾಕಸ್ ಲೆಕ್ಕ ಪ್ರದರ್ಶನದಲ್ಲಿ ತರಬೇತಿನಿರತ ವಿದ್ಯಾರ್ಥಿಗಳಾದ ಲಿಖಿತ, ಸೋನು ಮತ್ತು ಆಕಾಂಕ್ಷ ಅಬಾಕಸ್ ಕಲಿಕೆಯ ಕುರಿತು ಬಾಯ್ದೆರೆ ಲೆಕ್ಕ/ ಸಮಸ್ಯೆಗಳನ್ನು ಬಿಡಿಸಿ ಮೆಚ್ಚುಗೆ ಪಡೆದರು.
ಅಬಾಕಸ್ ತರಬೇತಿಯ ಮಹತ್ವ ಕುರಿತು ಶಾಲಾ ಗಣಿತ ಶಿಕ್ಷಕಿ ಬಿ.ಎನ್.ಸುಜಾತ ಮಾಹಿತಿ ನೀಡಿದರು. ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್ ವಂದಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.










