ಮಡಿಕೇರಿ ಜು.6 NEWS DESK : ಕೊಡಗು ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೊಡವ ಹೆರಿಟೇಜ್, ಮಿನಿ ವಿಧಾನಸೌಧ, ಸುವರ್ಣ ಕರ್ನಾಟಕ ಸಮುಚ್ಚಯ ಭವನ, ಮಂಗಳೂರು ರಸ್ತೆಯ ತಡೆಗೋಡೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಕೆಡಿಪಿ ಸಭೆಯಲ್ಲಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿತ್ತು, ಆದರೂ ಇದುವರೆಗೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಹಣವಿದ್ದರೂ ಸಹ ಕಾಮಗಾರಿಗಳನ್ನು ಏಕೆ ಪೂರ್ಣಗೊಳಿಸಿಲ್ಲ ಎಂದು ತರಾಟೆ ತೆಗೆದುಕೊಂಡ ಸಚಿವರು ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಡಾ.ಮಂತರ್ ಗೌಡ ಅವರು ಶಾಸಕರಾಗಿ ಒಂದು ವರ್ಷ ಕಳೆದಿದ್ದು, ತಡೆಗೋಡೆ ಪೂರ್ಣಗೊಳ್ಳದೆ ಟಾರ್ಪಲ್ ಹೊದಿಸಿರುವುದು ಬೇಸರ ತಂದಿದೆ. ಮೈಸೂರು ರಸ್ತೆಯಲ್ಲಿ ಕನ್ನಡ ಸುವರ್ಣ ಸಮುಚ್ಚಯ ಭವನ ಹೋಗುವಾಗ ಬರುವಾಗ ಪ್ರತಿ ನಿತ್ಯ ನೋಡುತ್ತಿದ್ದು, ಇನ್ನೂ ಸಹ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಇದೇ ರೀತಿ ಕಾಮಗಾರಿಗಳನ್ನು ಮುಂದುವರಿಸಿದರೆ ಅಮಾನತ್ತುಗೊಳ್ಳುತ್ತೀರ ಎಂದು ಎಚ್ಚರಿಸಿದರು. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಕಾಟಿಕೇರಿ ರಸ್ತೆ ಹದಗೆಟ್ಟಿದ್ದು, ಕಾಡು ಕಡಿದಿಲ್ಲ. ಲೋಕೋಪಯೋಗಿ ಇಲಾಖೆ ಕೆಲಸಗಳು ಇನ್ನಷ್ಟು ಸುಧಾರಣೆಯಾಗಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ಚೆನ್ನಾಗಿರುವ ರಸ್ತೆಗೆ ಮರು ಡಾಂಬರೀಕರಣ ಮಾಡುತ್ತಾರೆ. ಶಾಸಕರು ಅಥವಾ ಸ್ಥಳೀಯರ ಗಮನಕ್ಕೂ ತರುವುದಿಲ್ಲ ಎಂದು ದೂರಿದರು. ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಸಂಬಂಧ ಜಿಲ್ಲಾಧಿಕಾರಿ ಅವರು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು. ಮುಂಡ್ರೋಟು ಬಳಿ ಹಲವು ಮರಗಳನ್ನು ಕಡಿದಿದ್ದಾರೆ. ನೋಕ್ಯದ ಸೂಕ್ಷ್ಮ ಪರಿಸರ ವಲಯದಲ್ಲಿ ನೂರಾರು ಮರಗಳನ್ನು ಕಡಿದಿದ್ದು, ಇದಕ್ಕೆ ಅನುಮತಿ ನೀಡಿದವರು ಯಾರೂ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತರಾಟೆ ತೆಗೆದುಕೊಂಡರು.
ಮರ ಕಡಿಯಲು ಅನುಮತಿ ಇಲ್ಲದಿದ್ದರೂ ಸಹ ಮೀಸಲು ಅರಣ್ಯದಲ್ಲಿ ಮರ ಕಡಿಯಲು ಏಕೆ ಅನುಮತಿ ನೀಡಿದರು. ಕೊಡಗಿನ ಮುಂದಿನ ಪರಿಸ್ಥಿತಿ ಏನಾಗಬಹುದೆಂದು ಊಹಿಸಿದ್ದೀರಾ ಎಂದು ಕೇಳಿದರು. ಈಗಾಗಲೇ ಕೊಡಗಿನ ಪರಿಸರ ಹಾಳಾಗಿದ್ದು, ಅರಣ್ಯ ಸಂರಕ್ಷಣೆ ಮಾಡಿದಲ್ಲಿ ಕೊಡಗಿನ ಪರಿಸರ ಉಳಿಸಲು ಸಾಧ್ಯ. ಎಂದು ಪೊನ್ನಣ್ಣ ಅವರು ಪ್ರತಿಪಾದಿಸಿದರು. ವಿವಿಧ ಕಡೆಗಳಲ್ಲಿ ಸಸಿಗಳನ್ನು ಬೆಳೆಸಲು ಉದ್ದೇಶಿಸಲಾಗಿದ್ದು, ಸಸಿಗಳನ್ನೇ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆಸಿಲ್ಲ ಎಂದು ಪೊನ್ನಣ್ಣ ಅವರು ಬೇಸರ ವ್ಯಕ್ತಪಡಿಸಿದರು. ಬಡವರು ಮನೆ ಉಪಯೋಗಕ್ಕೆ ಒಂದು-ಎರಡು ಮರ ಕಡಿದರೆ ಪ್ರಕರಣ ದಾಖಲಿಸುತ್ತೀರಾ. ಶ್ರೀಮಂತರು ಎಕರೆಗಟ್ಟಲೆ ಮರವನ್ನು ಕಡಿಯುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವುದಿಲ್ಲವೇ ಎಂದು ಪೊನ್ನಣ್ಣ ಅವರು ಅಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಸಭೆಗೆ ಹಾಜರಾಗುವುದಿಲ್ಲ. ಇವರು ಆಡಳಿತ ವ್ಯವಸ್ಥೆಗೆ ಉತ್ತರದಾಯಿತ್ವ ಹೊಂದಿಲ್ಲವೇ ಎಂದು ಪೊನ್ನಣ್ಣ ಅವರು ಪ್ರಶ್ನಿಸಿದರು. ಮುಂಡ್ರೋಟು ಮರ ಕಡಿದಿರುವ ಬಗ್ಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಮರ ಕಡಿದಿರುವುದು ಅಪರಾಧವಾಗಿದ್ದು, ಈ ಸಂಬಂಧಪಟ್ಟ ಅರಣ್ಯ ರಕ್ಷಕರನ್ನು ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ಅರಣ್ಯ ಇಲಾಖೆಯಿಂದ ಎಲ್ಲೆಲ್ಲಿ ಸೋಲಾರ್ ಬೇಲಿ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಎಲ್ಲೆಲ್ಲಿ ಗೇಟ್‌ಗಳನ್ನು ನಿರ್ಮಾಣಮಾಡಲಾಗಿದೆ. ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುವಂತೆ ಸೂಚಿಸಿದರು. ಅರಣ್ಯ ಇಲಾಖೆಯ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿದಂತೆ ಹೆಚ್ಚಿನ ಪರೀಕ್ಷೆಯನ್ನು ನಡೆಸಬೇಕು. ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು. ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರ ಗಂಭೀರವಾಗಿ ಪ್ರಯತ್ನಿಸಿದ್ದು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗದಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಸಿಇಒ ಅವರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಡೆಂಗ್ಯೂ ನಿಯಂತ್ರಣಕ್ಕೆ ಮತ್ತಷ್ಟು ಎಚ್ಚರ ವಹಿಸಬೇಕು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊನ್ನಂಪೇಟೆ ಮತ್ತು ಕುಶಾಲನಗರ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಇದರ ನಿಯಂತ್ರಣ ಸಂಬAಧ 15 ದಿನಗಳಿಗೊಮ್ಮೆ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಬಗ್ಗೆ ಎಲ್ಲೆಡೆ ಅರಿವು ಮೂಡಿಸಬೇಕು ಎಂದರು. ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಧಿಕಾರಿಗಳು ಸದಾ ಸನ್ನದ್ಧರಾಗಿರಬೇಕು. ಯಾವುದೇ ರೀತಿಯ ಅನಾಹುತಗಳು ಉಂಟಾಗದAತೆ ಮುನ್ನೆಚ್ಚರ ವಹಿಸಬೇಕು ಎಂದು ಎನ್.ಎಸ್.ಭೋಸರಾಜು ಅವರು ಸ್ಪಷ್ಟ ನಿರ್ದೇಶನ ನೀಡಿದರು. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲಾಡಳಿತದಿಂದ ಈಗಾಗಲೇ ಗಾಜಿನ ಸೇತುವೆ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಮಾತನಾಡಿ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ತಾಲ್ಲೂಕು ಮಟ್ಟದಲ್ಲಿಯೂ ಸಹ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಲವರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದು, ಕೆಲವರಿಗೆ ಇನ್ನೂ ಸಹ ಮನೆ ನೀಡಿಲ್ಲ. ಇನ್ಫೋಸಿಸ್ ಸಂಸ್ಥೆ ವತಿಯಿಂದ ಸಹ 200 ಮನೆಗಳನ್ನು ನಿರ್ಮಿಸಲಾಗಿದೆ. ಆದರೂ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಸಂಬAಧ ಅರ್ಹರಿಗೆ ಮನೆ ಒದಗಿಸಬೇಕು ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು 2018 ರಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಲ್ಪಿಸಲು ಪ್ರಯತ್ನಿಸಲಾಗಿದೆ. ಇನ್ನೂ ಕೆಲವರಿಗೆ ಬಾಕಿ ಇದೆ ಎಂದು ಹೇಳಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಅರ್ಹ ನಿರಾಶ್ರಿತರಿಗೆಲ್ಲರಿಗೂ ಮನೆ ಕಲ್ಪಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಭೋಸರಾಜು ಅವರು ಬಡವರಿಗೆ ಪಾರದರ್ಶಕವಾಗಿ ಮನೆ ಹಂಚಿಕೆ ಮಾಡುವಂತೆ ಸೂಚಿಸಿದರು. ವಿರಾಜಪೇಟೆ ತಾಲ್ಲೂಕಿನ ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ, ತೋರ, ಪ್ರವಾಹ ಪೀಡಿತ ಪ್ರದೇಶಗಳಾದ ಬೇತ್ರಿ, ಕರಡಿಗೋಡು, ಗುಹ್ಯ ಮತ್ತಿತರ ಕಡೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಪೊನ್ನಣ್ಣ ಅವರು ಸೂಚಿಸಿದರು. ಸಮಿತಿ ಸದಸ್ಯರೊಬ್ಬರು ಮಾತನಾಡಿ ಜಿಲ್ಲೆಯಲ್ಲಿ ಕೃಷಿಕರಿಂದ ಟಾರ್ಪಲ್‌ಗೆ ಬೇಡಿಕೆ ಇದ್ದು, ಕೃಷಿಕರ ಬೇಡಿಕೆಗೆ ಅನುಗುಣವಾಗಿ ಟಾರ್ಪಲ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಶಾಲೆ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಸಚಿವರು ಶಾಲಾ ಕಟ್ಟಡಗಳ ಸುಸ್ಥಿತಿ ಸಂಬAಧ ವರದಿ ನೀಡುವಂತೆ ಸೂಚಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲೆಯಲ್ಲಿ ಸುಮಾರು 87 ಶಾಲೆಗಳು ಹಳೆಯದಾಗಿದ್ದು, ಮತ್ತೊಮ್ಮೆ ಸಮೀಕ್ಷೆ ಮಾಡಿ ವರದಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಶಿಕ್ಷಕರು ಪಾಠ ಪ್ರವಚನ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಎಚ್ಚರ ವಹಿಸಬೇಕು ಸೂಚಿಸಿದರು.
ಪ್ರತಿ ಶಾಲೆಯ ಸುಸ್ಥಿತಿ ಬಗ್ಗೆ ಸಮೀಕ್ಷೆ ಆಗಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ವ್ಯಾಪ್ತಿಯಲ್ಲಿ ಮಳೆಗಾಲದ ಅವಧಿಯಲ್ಲಿ ಯಾವುದೇ ಅವಘಡಗಳು ಉಂಟಾಗದಂತೆ ಎಚ್ಚರವಹಿಸಬೇಕು. ಹಳೆ ಕಂಬಗಳನ್ನು ಬದಲಿಸಬೇಕು. ಟ್ರಾನ್ಸ್ಫಾರ್ಮ್ಗಳು ಸುಸ್ಥಿತಿಯಲ್ಲಿ ಇರಬೇಕು ಎಂದರು. ಐಟಿಡಿಪಿ ಇಲಾಖೆ ಸಂಬಂಧಿಸಿದಂತೆ ಆದಿವಾಸಿ ಜನರಿಗೆ ಸರ್ಕಾರದ ಮೂಲಸೌಲಭ್ಯಗಳನ್ನು ಕಾಲ ಕಾಲಕ್ಕೆ ತಲುಪಿಸಬೇಕು. ಆದಿವಾಸಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಮತ್ತು ಮಾರ್ಗದರ್ಶನ ಮಾಡಬೇಕು. ಇವರು ಸಹ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ನಾಪೋಕ್ಲು ಭಾಗದಲ್ಲಿ ವಿದ್ಯುತ್ ವ್ಯತ್ಯಯ ನಿರಂತರವಾಗಿದ್ದು, ಈ ಬಗ್ಗೆ ಗಮನಹರಿಸಬೇಕು. ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರು ವಿದ್ಯಾರ್ಥಿ ನಿಲಯಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡಬೇಕು. ಅಧಿಕಾರಿಗಳು ಆಗಾಗ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಬೇಕು ಎಂದು ಎನ್.ಎಸ್.ಭೋಸರಾಜು ಅವರು ಸೂಚಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು. ಸಮಿತಿ ಸದಸ್ಯರಾದ ಸುನಿತಾ ಅವರು ಮಾತನಾಡಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ಜೊತೆಗೆ ಬಿಸಿನೀರು ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೊನ್ನಣ್ಣ ಅವರು ದೂರುಗಳು ಕೇಳಿಬರದಂತೆ ಗಮನಹರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು. ಎಚ್.ಎಂ.ಕಾವೇರಿ ಅವರು ಮಾತನಾಡಿ ಯಡವನಾಡು ಆಶ್ರಮ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಅವರು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.