ಮಡಿಕೇರಿ ಜು.6 NEWS DESK : ಭಾರತದ ಮಾಜಿ ಉಪ ಪ್ರಧಾನಿ, ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ 38ನೇ ಪುಣ್ಯ ಸ್ಮರಣೆ ಕಾರ್ಯಕ್ರಮವು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು. ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಎನ್.ಎಸ್.ಭೋಸರಾಜು ಅವರು ರಾಷ್ಟ್ರದ ಅನೇಕ ಮಹನೀಯರಲ್ಲಿ ಬಾಬು ಜಗಜೀವನ್ ರಾಂ ಅವರು ಒಬ್ಬರು ಎಂದರು. ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಬು ಜಗಜೀವನ ರಾಮ್ ಅವರು ಸರ್ಕಾರದ ಭಾಗವಾಗಿ ರೈಲ್ವೆ ಸಚಿವರಾಗಿ, ಕೃಷಿ ಸಚಿವರಾಗಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡು ದೇಶದ ಅಭಿವೃದ್ಧಿಗೆ ದುಡಿದಿದ್ದಾರೆ ಎಂದು ಸ್ಮರಿಸಿದರು. ಬಾಬು ಜಗಜೀವನ ರಾಮ್ ಅವರ ಮಗಳು ಮೀರಾ ಕುಮಾರ್ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭಾ ಅಧ್ಯಕ್ಷರಾಗಿ(ಸ್ಪೀಕರ್) ಕೆಲಸ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಬಾಬು ಜಗಜೀವನ್ ರಾಂ ಅವರು ದಕ್ಷ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಮಿಕ ಸಚಿವರಾಗಿ ಅನೇಕ ಕಾಯ್ದೆಗಳನ್ನು ರಚಿಸಿ ಬಡವರು, ರೈತರು, ಕೂಲಿ ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸಿದ್ದಾರೆ ಎಂದು ವರ್ಣಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಇತರರು ಇದ್ದರು.










