ಮಡಿಕೇರಿ ಜು.7 NEWS DESK : ಜಿಲ್ಲಾ ಪಂಚಾಯತ್ ಚುನಾವಣೆಗೆ ಮುಹೂರ್ತ ನಿಗಧಿಯಾಗುವ ಮೊದಲೇ ಕೊಡಗು ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಗಾಗಿ ಪೈಪೋಟಿ ನಡೆಯುತ್ತಿದ್ದು, ಸುಂಟಿಕೊಪ್ಪ ಕೇತ್ರದಲ್ಲಿ ನಾನು ಪ್ರಬಲ ಆಕಾಂಕ್ಷಿ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ತಿಳಿಸಿದ್ದಾರೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ಸಕ್ರಿಯ ಕಾರ್ಯಕರ್ತನಾಗಿರುವ ನನಗೆ ಜಿ.ಪಂ ಚುನಾವಣೆಯಲ್ಲಿ ಸುಂಟಿಕೊಪ್ಪ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ ಎನ್ನುವ ವಿಶ್ವಾಸವಿದೆ. ಆದ್ದರಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಇಬ್ಬರು ಶಾಸಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಎಲ್ಲಾ ಮುಖಂಡರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡ ನಾನು ನಂತರದ ದಿನಗಳಲ್ಲಿ ವಿವಿಧ ಘಟಕಗಳ ಪದಾಧಿಕಾರಿಯಾಗಿ, ಡಿಸಿಸಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷನಾಗಿ ಸುಮಾರು 6 ವರ್ಷಗಳ ಕಾಲ ಪ್ರಾಮಾಣಿಕವಾಗಿ ದುಡಿದು ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. ನಾಲ್ಕು ಬಾರಿ ಸುಂಟಿಕೊಪ್ಪ ಗ್ರಾ.ಪಂ ಯನ್ನು ಪ್ರತಿನಿಧಿಸಿದ್ದು, ಒಂದು ಬಾರಿ ಅಧ್ಯಕ್ಷನಾಗಿ, ಮತ್ತೊಂದು ಬಾರಿ ಉಪಾಧ್ಯಕ್ಷನಾಗಿ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನನ್ನ ಪಕ್ಷ ನಿಷ್ಠೆಯನ್ನು ಮೆಚ್ಚಿ ವರಿಷ್ಠರು ಇಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ. ಆದ್ದರಿಂದ ಜಿ.ಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಜನಸ್ನೇಹಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ನಾನು ಕೊಡಗು ಜಿಲ್ಲಾ ವಾಹನ ಚಾಲಕ, ಮಾಲೀಕ ಮತ್ತು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷನಾಗಿ ಕಳೆದ 14 ವರ್ಷಗಳಿಂದ ಕಾರ್ಯನಿರ್ವಹಿಸಿ ಶ್ರಮಿಕ ವರ್ಗದ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಜನರ ಪ್ರೀತಿ ಗಳಿಸಿರುವ ನನಗೆ ಜಿ.ಪಂ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ. ಒಂದು ವೇಳೆ ಪಕ್ಷ ಅವಕಾಶ ನೀಡಿದರೆ ಗೆಲುವು ನನ್ನದಾಗಲಿದೆ ಎಂದು ಉಸ್ಮಾನ್ ತಿಳಿಸಿದ್ದಾರೆ.