ಮಡಿಕೇರಿ ಜು.7 NEWS DESK : ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ನೆರವಾಗುವ ಪ್ರಮುಖ ಧ್ಯೇಯದೊಂದಿಗೆ ಕೊಡಗು ಪತ್ರಿಕಾ ಭವನ ಟ್ರಸ್ಟ್ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರ ಮಕ್ಕಳು ಹಾಗೂ ಸಾರ್ವಜನಿಕ ಮನವಿಗಳನ್ನು ಪುರಸ್ಕರಿಸಿ ಒಟ್ಟು 32ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿತು. ನಗರದ ರೆಡ್ ಬ್ರಕ್ಸ್ನ ಸತ್ಕಾರ ಸಭಾಂಗಣದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ವಿದ್ಯಾನಿಧಿ ವಿತರಣಾ ಕಾರ್ಯಕ್ರಮ’ದಲ್ಲಿ ಪತ್ರಕರ್ತರ 22 ಮಕ್ಕಳು ಹಾಗೂ ನೆರವು ಬಯಸಿದ್ದ ಇತರೆ 10 ಮಕ್ಕಳಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 1.60 ಲಕ್ಷ ರೂ. ವಿದ್ಯಾನಿಧಿಯನ್ನು ವಿತರಿಸಲಾಯಿತು. ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಹಾಗೂ ಟ್ರಸ್ಟಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಟ್ರಸ್ಟಿಗಳಾದ ಟಿ.ಪಿ.ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ನೆರವು ಮತ್ತು ಪ್ರೋತ್ಸಾಹ ನೀಡಬೇಕೆನ್ನುವ ಚಿಂತನೆಯಡಿ ವಿದ್ಯಾನಿಧಿಯ ಮೂಲಕ ಟ್ರಸ್ಟ್ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಮತ್ತಷ್ಟು ವ್ಯಾಪಕವಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ವಿದ್ಯಾನಿಧಿಯ ಪ್ರಮುಖ ಉದ್ದೇಶವಾಗಿದೆ. ವಿದ್ಯಾನಿಧಿ ವಿತರಣೆಯಲ್ಲಿ ಬಡವ ಬಲ್ಲಿದನೆನ್ನುವ ಯಾವುದೇ ತಾರತಮ್ಯ ಭಾವವಿಲ್ಲ. ಇದೊಂದು ಪತ್ರಕರ್ತರ ಕುಟುಂಬದ ಕಾರ್ಯಕ್ರಮವೇ ಆಗಿದ್ದು, ನಾವೆಲ್ಲ ಸೌಹಾರ್ದಭಾವದಿಂದ ಒಂದಾಗಿ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆನ್ನುವ ಆಶಯವಾಗಿದೆ ಎಂದರು. ಹಿರಿಯ ಟ್ರಸ್ಟಿಗಳು ಹಾಗೂ ‘ಶಕ್ತಿ’ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ, ಪತ್ರ‍್ರಿಕಾ ಭವನ ಟ್ರಸ್ಟ್ನ ರಚನೆಯ ಸಂದರ್ಭವೆ, ಅದಕ್ಕೆ ಬರುವ ಆದಾಯದಿಂದ ಪತ್ರಕರ್ತರು ಮತ್ತು ಸಾರ್ವಜನಿಕರ ಹಿತಕ್ಕಾಗಿ ಬಳಕೆ ಮಾಡಬೇಕೆನ್ನುವ ಮೂಲ ಚಿಂತನೆಯನ್ನು ಹೊಂದಲಾಗಿತ್ತು. ಮುಂಬರುವ ದಿನಗಳಲ್ಲಿ ವಿದ್ಯಾನಿಧಿಯ ಮೂಲ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮತ್ತಷ್ಟು ನೆರವನ್ನು ನೀಡಲು ಇಂದಿನ ಕಾರ್ಯಕ್ರಮ ಪ್ರೇರಣೆಯನ್ನು ನೀಡಿದೆ ಎಂದರು. ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಬೆಂಬಲ ನೀಡುವ ಈ ವಿದ್ಯಾನಿಧಿಯ ಸದುಪಯೋಗ ಪಡೆಯುವುದಕ್ಕೆ ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲ. ನಾವೆಲ್ಲ ಮನುಷ್ಯರೇ ಎನ್ನುವ ಉದಾತ್ತ ಚಿಂತನೆಯಡಿ, ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದ ನೆರವನ್ನು ಒದಗಿಸುವ ಮೂಲಕ ಅವರನ್ನು ರಾಷ್ಟçದ ಸತ್ಪçಜೆಗಳನ್ನಾಗಿ ರೂಪಿಸುವುದಷ್ಟೆ ನಮ್ಮೆಲ್ಲರ ಮೂಲ ಸಂಕಲ್ಪವಾಗಿದೆಯೆAದು ಹೇಳಿದರು. ವಿದ್ಯಾನಿಧಿಯ ಮೂಲಕ ನೀಡುವ ನೆರವು ಎನ್ನುವುದು ಮತ್ತೊಬ್ಬರಿಗೆ ಮಾಡುತ್ತಿರುವ ಸಹಾಯವೆಂದಾಗಲಿ, ವಿಶೇಷ ಕೊಡುಗೆಯಾಗಲಿ ಅಲ್ಲವೆ ಅಲ್ಲ. ಬದಲಾಗಿ, ತನ್ನ ಮಿತಿಗಳಡಿ ಒಬ್ಬಾತ ಮತ್ತೊಬ್ಬಾತನಿಗೆ ಆರ್ಥಿಕ ರೂಪದಲ್ಲಿ, ಸಾಮಾಜಿಕವಾಗಿ, ಕೌಟುಂಬಿಕ ಸ್ತರಗಳಲ್ಲಿ ನೀಡುವ ನೆರವು ಎನ್ನುವುದು ಬದುಕಿನ ಒಂದು ಕರ್ತವ್ಯ, ಪ್ರಜ್ಞೆ, ಬದುಕಿನ ನೀತಿ ಎನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾಜಕ್ಕೆ ತಮ್ಮಿಂದ ಏನನ್ನಾದರು ನೀಡಬೇಕೆನ್ನುವ ಚೆಂತನೆಯಡಿ ‘ಶಕ್ತಿ’ ಪತ್ರಿಕೆಯ 50ನೇ ವರ್ಷಾಚರಣೆ 2007 ರಲ್ಲಿ ಆಯೋಜಿತವಾಗಿದ್ದ ಸಂದರ್ಭ 10 ಲಕ್ಷ ರೂ.ಗಳ ಮೂಲ ನಿಧಿಯಡಿ ‘ಶಕ್ತಿ ಪ್ರತಿಷ್ಠಾನ’ವನ್ನು ಆರಂಭಿಸಿ ಮಕ್ಕಳ ಶಿಕ್ಷಣಕ್ಕೆ ನೆರವನ್ನು ನೀಡುತ್ತಾ ಬರಲಾಗಿದೆ. ನಮ್ಮೆಲ್ಲರ ದುಡಿಮೆ ನಮಗಾಗಿ, ನಮ್ಮ ಮಕ್ಕಳಿಗಾಗಿ ಮತ್ತು ನಮ್ಮ ಕುಟುಂಬಕ್ಕೆ ಸೀಮಿತವಾಗಿರುತ್ತದೆ. ಇದನ್ನು ಮೀರಿ ಸತ್ಕಾರ್ಯಗಳ ಮೂಲಕ ಸಮಾಜಕ್ಕೆ ಸದಾ ನೆರವಾಗುವ ಉದ್ದೇಶದಿಂದ ಶಕ್ತಿ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ನಂತರದ ದಿನಗಳಲ್ಲಿ ಈ ಮೂಲ ಮೊತ್ತವನ್ನು 30 ಲಕ್ಷಕ್ಕೆ ಹೆಚ್ಚಿಸಿ ಅದರಿಂದ ಬರುವ ಬಡ್ಡಿಯಿಂದ ಶೈಕ್ಷಣಿಕ ನೆರವನ್ನು ನೀಡಲಾಗುತ್ತಿದ್ದು, ಈ ಮೊತ್ತವನ್ನು ತನ್ನ ಅವಧಿಯಲ್ಲಿ 50 ಲಕ್ಷಕ್ಕೆ ಹೆಚ್ಚಿಸಿ ಸಾಮಾಜಿಕ ಕ್ಷೇತ್ರಕ್ಕೆ ಮೀಸಲಿಡಬೇಕೆನ್ನುವ ಚಿಂತನೆ ಹೊಂದಿರುವುದಾಗಿ ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ವಿದ್ಯಾನಿಧಿಯ ಮೂಲಕ ನೆರವು ಪಡೆದವರು, ಅದನ್ನು ಸಧ್ವಿನಿಯೋಗ ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ತಮ್ಮ ಶಿಕ್ಷಣಕ್ಕೆ ಈ ಸಮಾಜ ತಮಗೆ ನೆರವಾಗಿದೆಯಾದ್ದರಿಂದ ತಾನು ಸಹ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆನ್ನುವ ಉದಾತ್ತ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
::: ವಿದ್ಯಾನಿಧಿ ವಿತರಣೆ :::
ಕಾರ್ಯಕ್ರಮದಲ್ಲಿ ವಿದ್ಯಾನಿಧಿಯ ಮೂಲಕ ಮಕ್ಕಳಿಗೆ ಆರ್ಥಿಕ ನೆರವು ವಿತರಿಸಿ ಪ್ರೋತ್ಸಾಹಿಸಲಾಯಿತು. ನೆರವು ಪಡೆದುಕೊಂಡ ಮಕ್ಕಳ ಪೋಷಕರು ಹಾಗೂ ಪತ್ರಕರ್ತರಾದ ಎಸ್.ಎ.ಮುರಳೀಧರ್, ಶ್ರೀಧರ ನೆಲ್ಲಿತ್ತಾಯ, ಉಷಾ ಪ್ರೀತಂ ಮಾತನಾಡಿ ವಿದ್ಯಾನಿಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಡುವೆ ಹಿರಿಯ ಟ್ರಸ್ಟಿಗಳು ಹಾಗೂ ಗಾಯಕರೂ ಆದ ಜಿ.ಚಿದ್ವಿಲಾಸ್, ವಿದ್ಯಾರ್ಥಿನಿ ಕೀರ್ತಿ, ಎಸ್.ಎ.ಮುರಳೀಧರ್ ಸುಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರ ಮನಗೆದ್ದರು. ಟ್ರಸ್ಟಿ ಮುಲ್ಲೇಂಗಡ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತಾನ್ಯ ಮುರಳೀಧರ್ ಪ್ರಾರ್ಥಿಸಿ, ಟ್ರಸ್ಟಿ ಅನಿಲ್ ಎಚ್.ಟಿ ಕಾರ್ಯಕ್ರಮ ನಿರೂಪಿಸಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಸ್ವಾಗತಿಸಿ, ಖಜಾಂಚಿ ಕೆ.ತಿಮ್ಮಪ್ಪ ವಂದಿಸಿದರು.