ಮಡಿಕೇರಿ ಜು.10 NEWS DESK : ಸಿದ್ದಾಪುರ ಸಮೀಪದ ಗುಹ್ಯ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ವ್ಯಾಪಕ ಉಪಟಳ ನೀಡುತ್ತಿದ್ದ ನಾಲ್ಕು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಯಿತು.
ಕಾಡಾನೆಗಳು ಕೃಷಿ ಫಸಲು ನಾಶ ಮಾಡುವುದರೊಂದಿಗೆ, ಮನೆಯಂಗಳದಲ್ಲು ಕಾಣಿಸಿಕೊಂಡು ಹೂ ಕುಂಡಗಳನ್ನು ಕಿತ್ತೆಸೆದು ನಾಶ ಮಾಡುವ ಮೂಲಕ ಬೆಳೆೆಗಾರರಲ್ಲಿ ಆತಂಕ ಮೂಡಿಸಿತ್ತು. ಶಾಲಾ ಮಕ್ಕಳು, ಕಾರ್ಮಿಕರು, ಬೆಳೆಗಾರರು ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಳೆಯ ನಡುವೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡದ ಅಚ್ಚಯ್ಯ, ವಿನೋದ್, ಪ್ರವೀಣ್, ಸಚಿನ್, ವಿನೋದ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನೆಲ್ಲಿಹುದಿಕೇರಿ ಬೆಟ್ಟದಕಾಡು, ನಲ್ವತ್ತೆಕರೆ, ವಾಲ್ನೂರು, ಅತ್ತಿಮಂಗಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಕಾಡಾನೆಗಳ ಹಿಂಡು ಕೃಷಿ ಫಸಲನ್ನು ತಿಂದು ಧ್ವಂಸಗೊಳಿಸಿದೆ. ಅರಣ್ಯ ಇಲಾಖೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಆಶ್ರಯ ಪಡೆದುಕೊಳ್ಳುತ್ತಿವೆ. ಈ ಭಾಗದ ಬಹುತೇಕ ತೋಟಗಳಿಗೆ ದಾಳಿ ಮಾಡಿರುವ ಕಾಡಾನೆಗಳು ಕಾಫಿ ಗಿಡಗಳನ್ನು ನಾಶಗೊಳಿಸಿವೆ.