ಮಡಿಕೇರಿ ಜು.11 NEWS DESK : ಮುಡಾ ಒಂದು ಹಗರಣವೇ ಅಲ್ಲ, ಮುಖ್ಯಮಂತ್ರಿಗಳ ಪತ್ನಿಗೆ ಪರ್ಯಾಯವಾಗಿಯಷ್ಟೆ ನಿವೇಶನ ನೀಡಲಾಗಿದೆ ಎಂದಾದಲ್ಲಿ ಒಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ‘ಕ್ಲೀನ್ ಚಿಟ್’ ಪಡೆದುಕೊಳ್ಳಲಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.
ದಿಶಾ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಮಡಿಕೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮೈಸೂರು ಸಂಸ್ಥಾನದ ಅವಧಿಯಲ್ಲಿ ಆರಂಭವಾದ ಮುಡಾ, ಬಡವರಿಗೆ ನಿವೇಶನಗಳನ್ನು ಒದಗಿಸುವ ಸಂಸ್ಥೆಯಾಗಿತ್ತು. ಆದರೆ, ಇಂದು ಉಳ್ಳವರ ಪರ ಕಾರ್ಯನಿರ್ವಹಿಸುವ ಇಲಾಖೆಯಾಗಿದೆ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿರುವುದು ಮತ್ತು ಇಂತಹ ಹಗರಣಗಳು ನಡೆಯುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಯದುವೀರ್ ಆರೋಪಿಸಿದರು.