ಮಡಿಕೇರಿ ಜು.23 NEWS DESK : ಬಾಡಿಗೆ ವಾಹನಗಳಿಗೆ ‘ಪ್ಯಾನಿಕ್ ಬಟನ್’ ಮತ್ತು ‘ಜಿಪಿಆರ್‌ಎಸ್’ ಎನ್ನುವ ಅವೈಜ್ಞಾನಿಕ ಸಾಧನ ಅಳವಡಿಕೆಯನ್ನು ಸಾರಿಗೆ ಇಲಾಖೆ ಸರ್ಕಾರದ ಆದೇಶವನ್ನು ಕಡೆಗಣಿಸಿ ಕಡ್ಡಾಯ ಗೊಳಿಸಿದೆಯೆಂದು ಆರೋಪಿಸಿ, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್‌ನ ಕೊಡಗು ಜಿಲ್ಲಾ ಘಟಕ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್‌ನ ಜಿಲ್ಲಾಧ್ಯಕ್ಷ ಎಂ.ಎಸ್.ವಿನೋದ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಚಾಲಕರು, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್.ವಿನೋದ್ ಅವರು ಮಾತನಾಡಿ, ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆ ಟ್ಯಾಕ್ಸಿ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಎನ್ನುವ ಅವೈಜ್ಞಾನಿಕವಾದ ಸಾಧನ ಅಳವಡಿಸಲು ಸೂಚಿಸಿದೆ. ಇದರಿಂದ ಆರ್ಥಿಕವಾಗಿ ತೊಂದರೆಯಲ್ಲಿರುವ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಚಿತ ಸಾಧನವನ್ನು ವಾಹನಗಳಿಗೆ ಅಳವಡಿಸಲು ಕೇಂದ್ರ ಸರ್ಕಾರ 7890 ರೂ.ಗಳನ್ನು ನಿಗದಿ ಪಡಿಸಿದೆ. ಆದರೆ, ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಇವುಗಳ ಅಳವಡಿಕೆಗೆ ದುಪ್ಪಟ್ಟು ಅಂದರೆ 13 ಸಾವಿರದಿಂದ 15 ಸಾವಿರ ರೂ.ಗಳವರೆಗೆ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದರು. ರಾಜ್ಯ ಸಾರಿಗೆ ಸಚಿವರು ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಅಳವಡಿಕೆಗೆ ಸೆಪ್ಟೆಂಬರ್‌ವರೆಗೆ ಅವಕಾಶ ನೀಡಿದ್ದು, ಇವುಗಳನ್ನು ಅಳವಡಿಸದೆಯೂ ಫಿಟ್‌ನೆಸ್ ಸರ್ಟಿಫಿಕೇಟ್(ಎಫ್‌ಸಿ)ಗೆ ಅವಕಾಶ ನೀಡಿದ್ದಾರೆ. ಆದರೆ, ಸಾರಿಗೆ ಅಧಿಕಾರಿಗಳು ಸಚಿವರ ಆದೇಶವನ್ನು ನಿರ್ಲಕ್ಷಿಸಿ, ಎಫ್‌ಸಿ ಮಾಡಲು ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಕಡ್ಡಾಯ ಮಾಡಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ವಾಣಿಜ್ಯ ಉದ್ದೇಶದ ಹಳದಿ ಬೋರ್ಡ್ ವಾಹನಗಳವರು ದುಬಾರಿ ತೆರಿಗೆ, ಸ್ಪೀಡ್ ಗವರ್ನರ್, ದುಬಾರಿ ಇನ್ಶೂರೆನ್ಸ್ಗಳಿಂದ ಆರ್ಥಿಕವಾಗಿ ಹೆಚ್ಚಿನ ಹೊರೆಯನ್ನು ಅನುಭವಿಸುತ್ತಿದ್ದಾರೆ. ಇವುಗಳ ನಡುವೆ ಹಳದಿ ಬೋರ್ಡ್ ಮಾಡದೆ ‘ವೈಟ್ ಬೊರ್ಡ್’ನಲ್ಲೆ ಸಾಕಷ್ಟು ಮಂದಿ ಬಾಡಿಗೆ ಮಾಡುತ್ತಿರುವುದರಿಂದ ಹಳದಿ ಬೋರ್ಡ್ ವಾಹನ ಚಾಲಕರಿಗೆ ಸಾಕಷ್ಟು ನಷ್ಟವುಂಟಾಗುತ್ತಿದೆ. ಕರ್ನಾಟಕ ಮತ್ತು ಕೇರಳ ನಡುವೆ ವೈಟ್ ಬೋರ್ಡ್ ವಾಹನಗಳು ಯಾವುದೇ ಆತಂಕವಿಲ್ಲದೆ ಸಂಚರಿಸುತ್ತಿವೆ. ಹೀಗಿದ್ದೂ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಮೌನವಾಗಿ ಉಳಿದಿದ್ದಾರೆ ಎಂದು ಆರೋಪಿಸಿದರು. ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಮಸ್ಯೆಗಳನ್ನು ಪರಿಗಣಿಸಿ ಸರ್ಕಾರ ತಕ್ಷಣ ಟ್ಯಾಕ್ಸಿಗಳಿಗೆ ಸಂಬಂಧಿಸಿದ ನೂತನ ಆದೇಶವನ್ನು ರದ್ದುಗೊಳಿಸಲು ವಿಧಾನಸಭಾ ಅಧಿವೇಶನದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರಿಗೆ ಸಂಘಟನೆಯ ಪರವಾಗಿ ಮನವಿಯನ್ನು ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಣ್, ಜಂಟಿ ಕಾರ್ಯದರ್ಶಿ ಲಿಜೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಸಂತು ಕಾರ್ಯಪ್ಪ, ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಟ್ಯಾಕ್ಸಿ ಚಾಲಕರು ಪಾಲ್ಗೊಂಡಿದ್ದರು.