ವಿರಾಜಪೇಟೆ ಜು.26 NEWS DESK : ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆ ನಿವಾಸಿ ವೃದ್ದೆ ಕಮಲ ಅವರ ವಾಸದ ಮನೆ ಕುಸಿದು ಬಿದ್ದು ವಾಸಿಸಲು ಮನೆ ಇಲ್ಲದ ಪರಿಸ್ಥಿತಿ ಎದುರಾಗಿತ್ತು.
ಕುಟುಂಬಸ್ಥರಿAದ ವಿಚಾರ ತಿಳಿದುಕೊಂಡ ವಿರಾಜಪೇಟೆ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಗಣೇಶ್ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದಂತೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು.
ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಮನಸೋತ ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆ ನಿವಾಸಿಗಳು ಹಾಗೂ ಕುಟುಂಬಸ್ಥರು ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಕೆದಮುಳ್ಳೂರು ಗ್ರಾ.ಪಂ ಉಪಾಧ್ಯಕ್ಷ ಪರಮೇಶ್ ಮಾತನಾಡಿ ಮನೆ ಕುಸಿದು ಬಿದ್ದ ಸಂದರ್ಭ ಗ್ರಾಮಸ್ಥರು ಸೇರಿ ಅವರಿಗೆ ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿ ವತಿಯಿಂದ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರಲ್ಲದೆ, ಮಾನವೀಯ ನೆಲೆಗಟ್ಟಿನಲ್ಲಿ ಬಡಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಕುಟುಂಬಕ್ಕೆ ಆಸರೆಯಾಗಿದ್ದು ಮೆಚ್ಚುವ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸ್ಥಳೀಯರಾದ ಗೌಡುದಾರೆ ಚೋಟು ಬಿದ್ದಪ್ಪ ಮಾತನಾಡಿ, ಸ್ಥಳೀಯ ಪಂಚಾಯಿತಿ ವತಿಯಿಂದ ಆಗಬೇಕಾದ ಗೃಹ ನಿರ್ಮಾಣ ಕಾರ್ಯವನ್ನು ಸಾಮಾಜಿಕ ಮಾನವೀಯ ನೆಲೆಗಟ್ಟಿನಲ್ಲಿ ದಾನಿಗಳ ನೆರವಿನೊಂದಿಗೆ ಗೃಹ ನಿರ್ಮಾಣ ಮಾಡಿ ಬಡ ಕುಟುಂಬಕ್ಕೆ ನೆರವು ನೀಡಿದ್ದಾರೆ. ಇದು ಸಮಾಜಕ್ಕೆ ಮಾದರಿಯಾಗಿದೆ. ಗಣೇಶ್ ಅವರ ಸಮಾಜಮುಖಿ ಕಾರ್ಯ ಇನ್ನಷ್ಟು ಮುಂದುವರೆಯಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್, ನಾನು ನನ್ನ ಜೀವನದಲ್ಲಿ ಕಷ್ಟಪಟ್ಟು ಮೇಲಕ್ಕೆ ಬಂದಿದ್ದೇನೆ. ಬಡವರ ಕಷ್ಟದ ಬಗ್ಗೆ ನನಗೆ ಅರಿವಿದೆ. ಕಮಲ ಕುಟುಂಬದ ಕಷ್ಟ ನೋಡಿ ನನ್ನ ಕೈಯಿಂದ ಸುಮಾರು ಎರಡು ಲಕ್ಷ ರೂಪಾಯಿ ಹಾಗೂ ಕೆಲವರು ತಾವಾಗಿಯೇ ಮುಂದೆ ಬಂದು ಸುಮಾರು ಐವತ್ತು ಸಾವಿರ ರೂಪಾಯಿಗಳನ್ನು ನೀಡಿದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡಿ ನೀಡಿದ್ದೇನೆ. ನನ್ನೊಂದಿಗೆ ಕಮಲ ಅವರ ಸಹೋದರ ಮೋಣಪ್ಪ ಪೂಜಾರಿ, ಉಪಾಧ್ಯಕ್ಷ ಪುರುಷೋತ್ತಮ, ಜನಾರ್ಧನ, ನಾರಾಯಣ, ಖಜಾಂಚಿ ಸತೀಶ್ ಪೂಜಾರಿ ಹಾಗೂ ಸಿ.ಎ. ಬಷೀರ್ ಸಹಾಯಧನ ನೀಡಿ ಸಹಕರಿಸಿದ್ದಾರೆ ಎಂದು ಸ್ಮರಿಸಿದರು.
ಬಿಲ್ಲವ ಸೇವಾ ಸಮಾಜದ ಅಧ್ಯಕ್ಷನಾಗಿ ಸಂಘದ ಹೆಸರಿನಲ್ಲಿ ನಾನು ಸಹಾಯ ಹಸ್ತ ನೀಡಿ ಮನೆ ನಿರ್ಮಿಸಿದ್ದೇನೆ ಎಂದರು.
ಕಮಲ ಅವರು ಮಾತನಾಡಿ ನಾವು ಬಹಳ ಕಷ್ಟದಿಂದಲೇ ಜೀವನ ಸಾಗಿಸುತ್ತಾ ಬಂದಿದ್ದೇವೆ. ಮನೆ ನಿರ್ಮಾಣ ಮಾಡುವುದು ನಮಗೆ ಕನಸಾಗಿತ್ತು. ಈಗ ವಯಸ್ಸಾಗಿದೆ. ದುಡಿಯಲು ಸಾಧ್ಯವಿಲ್ಲ, ಸ್ವಂತ ಮನೆಯ ಯೋಚನೆ ಕೈ ಬಿಟ್ಟಿದ್ದು, ಗಣೇಶ್ ಅವರು ನಮಗೆ ಬೆನ್ನೆಲುಬಾಗಿ ನಿಂತು ಮನೆ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಬಿಲ್ಲವರ ಸಂಘದ ಆಡಳಿತ ಮಂಡಳಿಯವರಾದ ನಾರಾಯಣ, ಖಜಾಂಚಿ ಸತೀಶ್, ಪ್ರಮುಖರಾದ ಅನಿಲ್ ಸೀನಪ್ಪ, ಪುರುಷೋತ್ತಮ, ಜನಾರ್ದನ, ರಾಜ, ಹರೀಶ್, ಅನಿತ, ಚಿತ್ರ, ಕಿಶೋರ್, ಶಂಕರ, ಲಿಂಗಪ್ಪ, ಹೊನ್ನಪ್ಪ ಪೂಜಾರಿ ಸೇರಿದಂತೆ ಕೆದಮುಳ್ಳುರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಮಣಿ, ಪಂಚಾಯಿತಿ ಅಧ್ಯಕ್ಷರು, ತೋರ ವಾರ್ಡ್ ಸದಸ್ಯ ರಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.