ಸೋಮವಾರಪೇಟೆ ಆ.5 NEWS DESK : ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶಾಂತಳ್ಳಿ ಗ್ರಾಮದ ಕೆ.ಎಲ್.ಸತೀಶ್ ಮತ್ತು ಬಿದ್ದಪ್ಪ ಅವರ ಗದ್ದೆಯಲ್ಲಿ 9ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.
ಕ್ರೀಡಾಕೂಟವನ್ನು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಒಕ್ಕಲುತನ ಮೂಲ ಕಸುಬು ಮಾಡಿಕೊಂಡಿರುವ ಒಕ್ಕಲಿಗರಿಗೂ, ಕೆಸರಿಗೂ ಅವಿನಾಭಾವ ಸಂಬಂಧವಿದೆ. ಕೆಸರುಗದ್ದೆ ಕ್ರೀಡಾಕೂಟ ಎಂಬುದು ಜನಾಂಗದ ನಿಜವಾದ ಕ್ರೀಡೆಯಾಗಿದೆ. ಇದನ್ನು ಉಳಿಸಿಬೆಳೆಸಿಕೊಂಡು ಹೋಗುವುದು ಯುವ ಜನಾಂಗದ ಕರ್ತವ್ಯವಾಗಿದೆ. ಒಕ್ಕಲಿಗರು ಯಾವತ್ತು ಒಗ್ಗಟ್ಟಾಗಿರಬೇಕು. ನಮ್ಮ ಸಂಸ್ಕøತಿ, ಆಚಾರ-ವಿಚಾರವನ್ನು ಕಾಪಾಡಿಕೊಳ್ಳಲು ರಾಜಕೀಯ ರಹಿತವಾಗಿ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಮ್ಮ ಜನಾಂಗದ ಮಕ್ಕಳು ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘದಿಂದ 9.99ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಒಕ್ಕಲಿಗರ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದೆ. ಇದೇ ತಿಂಗಳು ಕಟ್ಟಡದ ಭೂಮಿ ಪೂಜೆ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಬ್ ಜೂನಿಯರ್ ಹಾಕಿ ತಂಡದ ನಾಯಕ ಹೆಗ್ಗುಳ ಗ್ರಾಮದ ಶಶಿತ್ಗೌಡ, ಪಿಎಚ್ಡಿ ಪದವಿಧರ ಯಡೂರು ಗ್ರಾಮದ ಡಾ. ಸಿ.ಆರ್.ಅಜಿತ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ವೇದಿಕೆಯ ಮಾಜಿ ಅಧ್ಯಕ್ಷ ಬಿ.ಜೆ.ದೀಪಕ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಗೌಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಸುರೇಶ್, ಜಿಲ್ಲಾಸ್ಪತ್ರೆಯ ತಜ್ಞವೈದ್ಯ ಡಾ.ಧನುಂಜಯ ಕುಮಾರ್, ಬೆಟ್ಟದಳ್ಳಿ ಗ್ರಾ.ಪಂ ಅಧ್ಯಕ್ಷ ತಮ್ಮಯ್ಯ, ಶಾಂತಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ, ದಾನಿಗಳಾದ ಕೂತಿ ಗ್ರಾಮದ ಗಣೇಶ್ ಇದ್ದರು.
ವಿವಿಧ ಸ್ಪರ್ಧೆಯಲ್ಲಿ ಮಹಿಳೆಯರು, ಪರುಷರು, ಮಕ್ಕಳು ಕೆಸರಿನಲ್ಲಿ ಬಿದ್ದೆದ್ದು ಸಂಭ್ರಮಿಸಿದರು.
ಕೆಸರಿನಲ್ಲಿ ಯುವಕರು ಮತ್ತು ಯುವತಿಯರ ಓಟವನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಹುರಿದುಂಬಿಸಿದರು. ಗದ್ದೆಯಲ್ಲಿನ ಕೆಸರಿನಲ್ಲಿ ನಾಟಿ ಮಾಡಿ ಅನುಭವವಿರುವ ಮಹಿಳೆಯರ ಥ್ರೋಬಾಲ್ ಪಂದ್ಯಾಟ ರೋಚಕತೆಯಿಂದ ಕೂಡಿತ್ತು.