ಗೋಣಿಕೊಪ್ಪ ಆ.5 NEWS DESK : ಕವಯತ್ರಿ ಹಾಗೂ ಲೇಖಕಿ ಸ್ಮಿತಾ ಅಮೃತರಾಜ್‍ಗೆ ರಾಜ್ಯ ಮಟ್ಟದ ಅಪ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರ ‘ನೆಲದಾಯ ಪರಿಮಳ’ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಮಟ್ಟದ ‘ಅಪ್ಪ ಪ್ರಶಸ್ತಿ’ ದೊರೆತಿದೆ. ತುಮಕೂರಿನ ಕನ್ನಡ ಭವನದಲ್ಲಿ ನಡೆದ ‘ಮುಂಗಾರು ಕವಿಗೋಷ್ಠಿ’ಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಧ್ವನಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಚೊಚ್ಚಲ ವರ್ಷದ ಈ ‘ಅಪ್ಪ ಪ್ರಶಸ್ತಿ’ಯನ್ನು ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಸಾಹಿತಿ ಮತ್ತು ಸಂಘಟಕ ಟಿ.ಸತೀಶ್ ಜವರೇಗೌಡ, ಲೇಖಕಿ ಬಾ.ಹ.ರಮಾಕುಮಾರಿ, ಹಡವನಹಳ್ಳಿ ವೀರಣ್ಣಗೌಡ ಉಪಸ್ಥಿತಿಯಲ್ಲಿ ಸ್ಮಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಐದು ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪತ್ರ ಒಳಗೊಂಡಿದೆ. ಸ್ಮಿತಾ ಅಮೃತರಾಜ್ ಅವರು ಈ ವರೆಗೆ ಒಟ್ಟು ಏಳು ಪುಸ್ತಕಗಳನ್ನು ರಚಿಸಿದ್ದಾರೆ. ಕಾಲ ಕಾಯುವುದಿಲ್ಲ, ತುಟಿಯಂಚಿನಲ್ಲಿ ಉಳಿದ ಕವಿತೆಗಳು, ಮಾತು ಮೀಟಿ ಹೋಗುವ ಹೊತ್ತು (ಕವನ ಸಂಕಲನ), ಅಂಗಳದಂಚಿನ ಕನವರಿಕೆಗಳು, ಒಂದು ವಿಳಾಸದ ಹಿಂದೆ, ನೆಲದಾಯ ಪರಿಮಳ (ಲಲಿತ ಪ್ರಬಂಧ) ಹಾಗೂ ಹೊತ್ತು ಹೊತ್ತಗೆ (ಪುಸ್ತಕ ಪರಿಚಯ) ಪ್ರಕಟಿತ ಗಮನಾರ್ಹ ಕೃತಿಗಳಾಗಿವೆ.