ಮಡಿಕೇರಿ ಆ.5 NEWS DESK : ಕೊಡಗಿನ ವಿವಿಧೆಡೆ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳಿಗೆ ಸರ್ಕಾರ ನಿವೇಶನ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಮುದ್ದ ಕಳಲ ಯುವಕ ಸಂಘದ ಜಿಲ್ಲಾಧ್ಯಕ್ಷ ಜ್ಯೋತಿ ಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ವತಂತ್ರ ಪೂರ್ವದಿಂದಲೇ ಸ್ವಂತ ಮನೆ ಇಲ್ಲದೆ ಕೊಡಗಿನ ವಿವಿಧೆಡೆ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳು ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ್ಲ ಎಂದು ಆರೋಪಿಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮನೆ ನಿರ್ಮಿಸಿಕೊಡುವ ಭರವಸೆ ನೀಡಿರುವುದು ಸ್ವಾಗತಾರ್ಹ. ಆದರೆ ನಮ್ಮ ರಾಜ್ಯದಲ್ಲೇ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳು ಸ್ವಂತ ಸೂರು ಮತ್ತು ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರೂ ಸರ್ಕಾರ ಸ್ಪಂದಿಸದೆ ಇರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರ ನಿವೇಶನ ಮಂಜೂರು ಮಾಡುವ ಮೂಲಕ ಬಡ ಕುಟುಂಬಗಳನ್ನು ಲೈನ್ ಮನೆಯಿಂದ ಮುಕ್ತಗೊಳಿಸಬೇಕೆಂದು ಜ್ಯೋತಿ ಕುಮಾರ್ ಮನವಿ ಮಾಡಿದ್ದಾರೆ.