ನಾಪೋಕ್ಲು ಆ.7 NEWS DESK : ಪ್ರತಿಯೊಂದು ಸಮುದಾಯಗಳು ತಮ್ಮ ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಡೆಸುವಾಗ ಯುವಪೀಳಿಗೆಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿ ಸಂಸ್ಕೃತಿಯ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ಮೈಸೂರು ಗೌಡ ಸಮಾಜದ ನಿಕಟ ಪೂರ್ವ ಅಧ್ಯಕ್ಷ ತೋಟಂಬೈಲು ಮನೋಹರ್ ಅಭಿಪ್ರಾಯಪಟ್ಟರು. ಮೈಸೂರಿನ ಕೊಡಗು ಗೌಡ ಸಮಾಜ ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ನಡೆದ “ಆಟಿ ಗೌಜಿ “ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳಲ್ಲಿ ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಕಾಯ್ದುಕೊಂಡು ಯುವಜನರನ್ನು ಆಕರ್ಷಿಸಬೇಕು ಎಂದರು. ರಂಗಾಯಣ ಕಲಾವಿದೆ ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಸಮಾಜದ ನಿಕಟ ಪೂರ್ವ ಅಧ್ಯಕ್ಷೆ ಗೀತಾ ಮೋಂಟಡ್ಕ ಮಾತನಾಡಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯಗಳ ಸಂಸ್ಕೃತಿಯಲ್ಲಿ ಅನ್ಯೋನ್ಯತೆ ಇದ್ದರೂ ಆಯಾ ಪರಿಸರಕ್ಕೆ ಸಂಬಂಧಪಟ್ಟಂತೆ ಕೆಲವು ಬದಲಾವಣೆಗಳಿವೆ. ಆದರೆ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ಹಿನ್ನೆಲೆ ಇರುತ್ತದೆ. ಅಂತಹ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದರು. ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಶ್ರೀಧರ್ ಮಾತನಾಡಿ, ಕೊಡಗಿನ ಗೌಡರ ಶಿಸ್ತು, ಸಂಸ್ಕೃತಿ, ಸಂಪ್ರದಾಯಗಳನ್ನು ಕೊಂಡಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ಸಮಾಜದ ಅಧ್ಯಕ್ಷ ಕುಂಬಾರನ ಬಸಪ್ಪ, ಇಂದಿನ ಪೀಳಿಗೆಗೆ ನಮ್ಮ ಆಚಾರ, ವಿಚಾರ, ಕೃಷಿ, ಚಟುವಟಿಕೆ, ಪರಿಸರ ಇವುಗಳ ಬಗ್ಗೆ ಕನಿಷ್ಠ ಜ್ಞಾನ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವೇದಿಕೆಯಲ್ಲಿ ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೇಟಿ ನಂದ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಮಾಜದ ಅಧ್ಯಕ್ಷ ನಡುವಟ್ಟೆರಾ ಗೀತಾ ಲಕ್ಷ್ಮಣ, ಕಾರ್ಯದರ್ಶಿ ಕುಂಟುಪುಣಿ ಶೀಲಾ, ಸಮಾಜದ ನಿರ್ದೇಶಕರು ಹಾಗೂ ಸದಸ್ಯರು ಹಾಜರಿದ್ದರು. ಗಣ್ಯರು ಕಾರ್ಯಕ್ರಮವನ್ನು ಹಾಗೂ ಆಟಿ ಹದಿನೆಂಟರ ಪ್ರಯುಕ್ತ 18 ಆಹಾರ ಮಳಿಗೆಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೈಸೂರು ಕೊಡಗು ಗೌಡ ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಸ್ವಾಗತಿಸಿದರು. ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಸಮಾಜದ ನಿರ್ದೇಶಕಿ ಶಂಕರನ ಶ್ಯಾಮಲಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು, ಸಮಾಜದ ಉಪಾಧ್ಯಕ್ಷ ಕುದುಪಜೆ ಚಂದ್ರಶೇಖರ್ ವಂದಿಸಿದರು. ಆಟಿ ಹದಿನೆಂಟರ ಪ್ರಯುಕ್ತ 18 ಆಹಾರ ಮಳಿಗೆಗಳನ್ನು ತೆರೆಯಲಾಗಿದ್ದು, ಅದರಲ್ಲಿ ಆಟಿ ತಿಂಗಳಿನಲ್ಲಿ ಬಳಸುವ ವೈವಿಧ್ಯಮಯ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. 18 ಮಳಿಗೆಗಳಿಗೆ 18 ಗೋತ್ರಗಳ ಹೆಸರನ್ನು ಇಡಲಾಗಿತ್ತು. ಪ್ರತಿ ಮಳಿಗೆಗಳ ಮುಂದೆ ಜನರು ಸಂಭ್ರಮದಿಂದ ತಮಗಿಷ್ಟ ಬಂದ ಆಹಾರವನ್ನು ಸೇವಿಸಿ ಸಂಭ್ರಮಿಸಿದರು. ವರದಿ : ದುಗ್ಗಳ ಸದಾನಂದ.