ಮಡಿಕೇರಿ ಆ.7 NEWS DESK : ಕೊಡಗು ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಲ್ಲಿನ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೆ ದಿನ ನಿತ್ಯದ ಜೀವನ ನಡೆಸಲು ತೊಂದರೆ ಉಂಟಾಗಿದ್ದು, ಈ ಮಧ್ಯೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಹಣಕಾಸು ಸಂಸ್ಥೆಗಳು/ ಗಿರವಿದಾರರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಕೃಷಿಯೇತರ ಸಾಲಗಳನ್ನು ಪಡೆದಿರುತ್ತಾರೆ ಈ ಬಾಬು ಸದರಿ ಸಾಲ ನೀಡಿದ ಹಣಕಾಸು ಸಂಸ್ಥೆಗಳು ಪ್ರತೀ ವಾರ/ಮಾಹೆ ಕಂತುಗಳಲ್ಲಿ ಸಾಲ ವಸೂಲಿ ಮಾಡುತ್ತಿರುವುದು ಸರಿಯಷ್ಟೇ.
ಈ ಸಂಸ್ಥೆಗಳಿಂದ ಸಾಲವನ್ನು ಪಡೆಯುವ ಸಾರ್ವಜನಿಕರು ಬಹುತೇಕ ಕೂಲಿ ಕಾರ್ಮಿಕರು, ಕೃಷಿಕರು ಮತ್ತು ಶ್ರಮಿಕರಾಗಿರುತ್ತಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಕೂಲಿ ಕಾರ್ಮಿಕರು, ಕೃಷಿಕರು ಹಾಗೂ ಶ್ರಮೀಕ ವರ್ಗದ ಜನರಿಗೆ ಕೆಲಸವಿಲ್ಲದೆ ಅವರ ಆದಾಯದಲ್ಲಿ ವ್ಯತ್ಯಾಯ ಉಂಟಾಗಿರುತ್ತದೆ. ಇದರಿಂದ ಸದರಿಯವರಿಗೆ ಕಂತುಗಳನ್ನು ಪಾವತಿಸಲು ಕಷ್ಟಸಾಧ್ಯವಾಗಿದೆ ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆಗಳು/ಗಿರವಿದಾರರು ಹಾಗೂ ಮೈಕ್ರೋ ಫೈನಾನ್ಸ್ ಸಾಲ ಸೌಲಭ್ಯ ನೀಡುವ ಸಂಸ್ಥೆಗಳು ಸಾಲ ವಸೂಲಿ ಮಾಡುವ ತಿಂಗಳ ಕಂತುಗಳನ್ನು ಸೆಪ್ಟೆಂಬರ್ 15ರ ನಂತರ ವಸೂಲಿ ಮಾಡಲು ಸೂಚಿಸುವುದು ಸೂಕ್ತವೆಂದು ತೀರ್ಮಾನಿಸಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.