ಕುಶಾಲನಗರ ಆ.7 NEWS DESK : ಶಾಲಾ ಮಕ್ಕಳ ಮನದಲ್ಲಿ ಸಾಮರಸ್ಯದ ಮೊಹರು ಬೆಳೆಸಲು ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಾವು ಮನುಜರು ವಿನೂತನ ಕಾರ್ಯಕ್ರಮ ನಡೆಯಿತು. ಶಾಲೆಯ ಎಸ್.ಡಿ.ಎಂ.ಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ( ಎನ್ನೆಸ್ಸೆಸ್) ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವು ಮನುಜರು ಕಾರ್ಯಕ್ರಮದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್,
ಮಕ್ಕಳಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ, ಪರಿಸರ ಪ್ರಜ್ಞೆ, ಮೌಢ್ಯಗಳ ನಿವಾರಣೆ ಬಗ್ಗೆ ಜಾಗೃತಿ ಸೇರಿದಂತೆ ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸಲು ಸರ್ಕಾರವು ಶಾಲಾ ಶಿಕ್ಷಣ ಇಲಾಖೆಯ ಮೂಲಕ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದ “ನಾವು ಮನುಜರು” ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಸಾಮರಸ್ಯ, ಸಹಬಾಳ್ವೆ, ಸಾಂವಿಧಾನಿಕ ಮೌಲ್ಯ ಬೆಳೆಸಲು ಸಾಧ್ಯ ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಪರಿಸರ ಪ್ರಜ್ಞೆ, ಮೂಢನಂಬಿಕೆಗಳ ನಿರ್ಮೂಲನೆ ಮತ್ತು ಮೂಢನಂಬಿಕೆಗಳ ಸಮನ್ವಯತೆ ಮತ್ತು ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಭಾಗವಾಗಿದೆ. ಇದರಿಂದ ಮಕ್ಕಳಲ್ಲಿ ಭಾವನಾತ್ಮಕ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸೇವಾ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ನಿತ್ಯ ಜೀವನದಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಮನೆಮದ್ದು, ವಿಜ್ಞಾನ ಪ್ರಯೋಗಾಲಯ ಬಳಸಿ ನಡೆಸುವ ಪ್ರಯೋಗಗಳು, ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುವ ಚಟುವಟಿಕೆಗಳನ್ನು ರೂಪಿಸಿ ಪ್ರಶ್ನಿಸುವ ಮನೋಭಾವ ಬೆಳೆಸುವ ಪ್ರಯತ್ನಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಪ್ರೇಮಕುಮಾರ್ ತಿಳಿಸಿದರು. ನಾವು ಮನುಜರು ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ರಂಗಭೂಮಿ ನಿರ್ದೇಶಕ ಟಿ.ಭರಮಣ್ಣ ಬೆಟ್ಟಗೇರಿ ಮಾತನಾಡಿ, ನಾವು ಮನುಜರು ಕಾರ್ಯಕ್ರಮವು ಶಾಲಾ ಮಕ್ಕಳ ಮನದಲ್ಲಿ ಸಾಮರಸ್ಯದ ಮೊಹರು ಒತ್ತಲು ಸಹಕಾರಿಯಾಗಿದೆ ಎಂದರು. ನಾವು ಮನುಜರು ಕಾರ್ಯಕ್ರಮದಡಿ ಸಾಮರಸ್ಯ ಬೆಳೆಸಲು ಸ್ಥಳೀಯ ಮತ್ತು ರಾಷ್ಟ್ರೀಯ ಹಬ್ಬಗಳು, ಆಟಗಳು, ಕ್ರೀಡೆಗಳು ಇತ್ಯಾದಿಗಳನ್ನು ಆಧರಿಸಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ ಬೆಳೆಸಲು ಮತ್ತು ಅದರ ಮಹತ್ವದ ಬಗ್ಗೆ ಚರ್ಚೆ, ಸಂವಾದ ನಡೆಸುವ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ದೇಶದ ಸಮಾಜ ಸುಧಾರಕರು, ಕ್ರಾಂತಿಗಳ ಮಾಹಿತಿ ಒದಗಿಸುವುದು, ಸಮೀಪದ ಐತಿಹಾಸಿಕ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ, ವೈಚಾರಿಕತೆ ಮತ್ತು ಪ್ರತಿ ಸಮಸ್ಯೆಯ ಸಾಧಕ–ಬಾಧಕಗಳನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಭರಮಣ್ಣ ತಿಳಿಸಿದರು. ಶಾಲೆಯ ಎಸ್ ಡಿ ಎಂ ಸಿ.ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ.ಸದಸ್ಯರಾದ ಕೆ.ಪಿ.ರೇವಣ್ಣ, ಕೆಂಪು.ಎಸ್.ರಾಜಾಚಾರಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ ಇದ್ದರು. ಪೋಷಕ ಪರಿಷತ್ತಿನ ಸದಸ್ಯರು ಹಾಗೂ ವಿದ್ಯಾರ್ಥಿ– ಪೋಷಕರು ಪಾಲ್ಗೊಂಡಿದ್ದರು.