ಮಡಿಕೇರಿ ಆ.7 NEWS DESK : ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಆ.10 ರಂದು ಉತ್ತರ ಕೊಡಗಿನ ಮಾದಾಪುರದಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಅಂದು 10.30 ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ವಿರೋಧಿಸಿ ಹಕ್ಕೊತ್ತಾಯ ಮಂಡಿಸಲಾಗುವುದು. ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಸರ್ವ ಕೊಡವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ 2018 ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್, ಬದಿಗೇರಿನಾಡ್ ಮತ್ತು ಗಡಿನಾಡ್‍ನಲ್ಲಿ ಭೀಕರ ಜಲಕಂಟಕದಿಂದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು. 15 ವಷಗಳ ಹಿಂದೆ ಗಡಿನಾಡಿನ ಬಿಳಿಗೇರಿ ಭಾಗದಲ್ಲಿ ಸಂಭವಿಸಿದ ಭೂಕಂಪನದಿಂದ ಬಾಚಿನಾಡಂಡ ಅಪ್ಪಾಜಿ ಕುಟುಂಬದ ಮನೆ ಸಂಪೂರ್ಣ ನಾಶವಾಗಿತ್ತು. ಇದೀಗ ಕೇರಳದ ವಯನಾಡಿನ ದುರಂತ ನಮ್ಮ ಮುಂದೆ ಇದ್ದು, ಮತ್ತೊಮ್ಮೆ ಈ ಅನಾಹುತ ಸಂಭವಿಸದಂತೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರಬೇಕು. ಕೊಡಗು ಪ್ರದೇಶ ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿಗೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಮಾನವ ಸರಪಳಿ ಸಂದರ್ಭ ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಹಾರಂಗಿ ಜಲಾಶಯ ಹಾಗೂ ದಕ್ಷಿಣಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಕಟ್ಟಿರುವ ಕಟ್ಟೆಯಲ್ಲಿ ಹೂಳು ತುಂಬಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ. ಜಲಾಶಯದ ಹೂಳು ತೆಗೆಯದೆ ಮತ್ತು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಜಲನಾಳಗಳಿಗೆ ಹಾನಿಯಾಗಿ ಭೂಗರ್ಭ ಸೀಳಿ ಅನಾಹುತಗಳಿಗೆ ದಾರಿಯಾಗುವ ಸಾಧ್ಯತೆಗಳಿದೆ. ವಯನಾಡಿನಂತಹ ದುರಂತ ಕೊಡಗಿನಲ್ಲೂ ಸಂಭವಿಸಬಾರದೆಂದರೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಎನ್.ಯು.ನಾಚಪ್ಪ ಹೇಳಿದ್ದಾರೆ. ಟೌನ್ ಶಿಪ್, ನಗರೀಕರಣ, ವಿಲ್ಲಾ, ರೆಸಾರ್ಟ್‍ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ, ಭೂದೇವಿಗೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೈ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾಟ್ರ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.