ಮಡಿಕೇರಿ ಆ.10 NEWS DESK : ಗ್ರಾಮೀಣ ಸೊಗಡಿನ ಜಾನಪದ ಕಲೆಯ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ ಸಮೀಪ ಕಗ್ಗೋಡ್ಲುವಿನ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು. ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾದ ಮಡಿಕೇರಿ ಘಟಕ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೊಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನ ದಿವಂಗತ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ಜಿಲ್ಲೆಯ ಹಲವು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ, ಸಾರ್ವಜನಿಕ ಪುರುಷರ ವಾಲಿಬಾಲ್, ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್, ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ, ಪ್ರೌಢಶಾಲಾ ಬಾಲಕ-ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು, ಅದರಲ್ಲೂ ಹಗ್ಗಜಗ್ಗಾಟ ಸ್ಪರ್ಧೆ ಅತ್ಯಂತ ಕುತೂಹಲಕಾರಿಯಾಗಿ ನಡೆದು ಗಮನ ಸೆಳೆಯಿತು.
ಉದ್ಘಾಟನೆ :: ಕ್ರೀಡಾಕೂಟವನ್ನು ಕ್ರೀಡಾ ಇಲಾಖೆ ಅಧಿಕಾರಿ ವಿಸ್ಮಯಿ, ನೆಹರು ಯುವ ಕೇಂದ್ರದ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್ ಉದ್ಘಾಟಿಸಿದರು. ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಹಾಕತ್ತೂರು ಗ್ರಾ.ಪಂ ಸದಸ್ಯ ಪೊನ್ನಚ್ಚನ ಲವಕುಮಾರ್, ಯೂತ್ ಹಾಸ್ಟೆಲ್‍ನ ಅಧ್ಯಕ್ಷ ಐಯ್ಯಣ್ಣ, ಪ್ರಮುಖರಾದ ರಾಜೇಶರ್, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಹಾಜರಿದ್ದರು.